ಬೆಂಗಳೂರು: ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ತಾಂತ್ರಿಕ ಅಡ್ಡಿಯಾದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಹಂಗಾಮಿ ಸಭಾಪತಿ ನೇಮಕಕ್ಕೆ ಬಿಜೆಪಿ ನಿರ್ಧರಿಸಿದೆ.
ಪರಿಷತ್ ಹಂಗಾಮಿ ಸಭಾಪತಿಯಾಗಿ ಬಿಜೆಪಿ ಸದಸ್ಯ ರಘುನಾಥ್ ರಾವ್ ಮಲ್ಕಾಪುರೆ ನೇಮಕಕ್ಕೆ ಬಿಜೆಪಿ ಚಿಂತನೆ ನಡೆಸಿದೆ.
ಮಲ್ಕಾಪುರೆ ನೇಮಕಕ್ಕೆ ಸಿಎಂ ಬೊಮ್ಮಾಯಿ ಒಲವು ಹೊಂದಿದ್ದಾರೆ. ಹಂಗಾಮಿ ಸಭಾಪತಿ ನೇಮಕ ಸಂಬಂಧ ಕೆಲವೇ ಹೊತ್ತಿನಲ್ಲಿ ರಾಜ್ಯಪಾಲರಿಗೆ ಬೊಮ್ಮಾಯಿ ಶಿಫಾರಸು ಕಳುಹಿಸಲಿದ್ದಾರೆ. ಹಂಗಾಮಿ ಸಭಾಪತಿ ನೇಮಕ ಸಂಬಂಧ ನಿನ್ನೆ ಸಂಜೆ ರಾಜ್ಯಪಾಲರ ಜೊತೆ ಮಾತುಕತೆಯೂ ನಡೆದಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಆಮಿಷದ ಅಥವಾ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ: ಆರಗ ಜ್ಞಾನೇಂದ್ರ
ಹಂಗಾಮಿ ಸಭಾಪತಿ ನೇಮಕದ ಬಳಿಕ ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕಾರವಾಗಲಿದ್ದು, ಬಳಿಕ ಇಂದು ಸಂಜೆ ಅಥವಾ ನಾಳೆ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಏನಿದು ತಾಂತ್ರಿಕ ಅಡ್ಡಿ: ಮೇಲ್ಮೆನೆ ಸದಸ್ಯರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಪತಿ ಅಥವಾ ಉಪ ಸಭಾಪತಿಗೆ ಸಲ್ಲಿಸಬೇಕು. ಆದರೆ ಹೊರಟ್ಟಿಯವರೇ ಸಭಾಪತಿಯಾದ ಕಾರಣ ಸಭಾಪತಿಗೆ ರಾಜೀನಾಮೆ ನೀಡಲು ಆಗುವುದಿಲ್ಲ. ಉಪ ಸಭಾಪತಿ ಸ್ಥಾನ ಖಾಲಿಯಿದೆ. ಹೀಗಾಗಿ ಹೊರಟ್ಟಿ ಬಿಜೆಪಿ ಸೇರ್ಪಡೆ ತಡವಾಗುತ್ತಿದೆ.