ಉಡುಪಿ: ಕಾಲೇಜೊಂದರಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ, ಇದನ್ನು ಕಾಯುವ ತಾಳ್ಮೆ ಇಲ್ಲದ ಬಿಜೆಪಿಯವರು ಬೀದಿಗೆ ಇಳಿದು ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಆರೋಪಿಸಿದರು.
ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನಿನ ಪ್ರಕಾರ ಶಿಕ್ಷೆ ಆಗಲೇ ಬೇಕು. ಬಿಜೆಪಿಯವರು ಇದನ್ನು ದೊಡ್ಡದು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಎಬಿವಿಪಿಯವರು ಪ್ರತಿಭಟನೆ ಮಾಡುವ ಅಗತ್ಯವೇನಿತ್ತು? ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಸ್ಥಳೀಯ ಶಾಸಕರು ಅಡ್ಡಿ ಪಡಿಸಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡುವರೆ ತಿಂಗಳಾಗಿದೆ. ಜಿಲ್ಲೆಯ ಪೊಲೀಸ್ ಇಲಾಖೆಯ ಯಾವ ಅಧಿಕಾರಿಯನ್ನು ವರ್ಗಾವಣೆ ಮಾಡಿಲ್ಲ. ಬಿಜೆಪಿ ಅವಧಿಯಲ್ಲಿದ್ದ ಅಧಿಕಾರಿಗಳೇ ಈಗಲೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಡೆಸುವ ತನಿಖೆಯ ಮೇಲೆ ಬಿಜೆಪಿಗರಿಗೆ ನಂಬಿಕೆ ಇಲ್ಲವೇ? ಪೊಲೀಸ್ ಇಲಾಖೆ ವಿರುದ್ಧವೇ ಮಾತನಾಡುತ್ತಿದ್ದಾರೆ. ತನಿಖಾ ವರದಿ ಬರುವವರೆಗೂ ಕಾಯುವ ತಾಳ್ಮೆ ಏಕಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರ ವೈಯಕ್ತಿಕ ವಿಷಯವನ್ನು ಬೀದಿಗೆ ಎಳೆದು ತಂದಿರುವುದು ಸರಿಯಲ್ಲ. ಪ್ರಕರಣದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೋಮು ಗಲಭೆ ಸೃಷ್ಟಿಸುವುದು ಬಿಜೆಪಿಯ ಅಜೆಂಡಾವಾಗಿದೆ. ಸ್ಥಳೀಯ ಶಾಸಕರು ಗೂಂಡಾಗಿರಿ ವರ್ತನೆ ತೋರಿಸುತ್ತಿದ್ದಾರೆ. ಮಳೆಯಿಂದ ಜಿಲ್ಲಾದ್ಯಂತ 28 ಕೋ.ರೂ. ನಷ್ಟವಾಗಿದೆ. ಮನೆ, ದನದ ಕೊಟ್ಟಿಗೆ ಬಿದ್ದು ಹೋಗಿದೆ. ಜೀವ ಹಾನಿಯಾಗಿದೆ. ಇದರ ಬಗ್ಗೆ ಮಾತನಾಡುತ್ತಿಲ್ಲ.ಮಲ್ಪೆಯಲ್ಲಿ ಮೀನುಗಾರರ ಬದುಕು ಸಂಕಷ್ಟದಲ್ಲಿದೆ. ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮಗ್ರ ತನಿಖೆ ನಡೆಸಲಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಬಿಜೆಪಿಗರಿಗೆ ಪೊಲೀಸ್ ತನಿಖೆಯ ಮೇಲೆ ನಂಬಿಕೆಯಿಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವುದು ಅವರಿಗೆ ಬೇಕಾಗಿಲ್ಲ. ಕೀಳುಮಟ್ಟದ ಪ್ರಚಾರ ಹಾಗೂ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರತಿಭಟನೆ ಇತ್ಯಾದಿ ಮಾಡುತ್ತಿದ್ದಾರೆ ಎಂದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಪ್ರಮುಖರಾದ ಕುಶಲ ಶೆಟ್ಟಿ, ಸದಾಶಿವ ಪೂಜಾರಿ, ಸುರೇಶ್ ಶೆಟ್ಟಿ, ಪ್ರಾಶಾಂತ್ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸ್ಟೋಟಕ ಹೇಳಿಕೆ