Advertisement

ಬರ ವೀಕ್ಷಣೆ, ಪಕ್ಷ ಸಂಘಟನೆಗೆ 18ರಿಂದ ಬಿಜೆಪಿ ಟೀಂ ಪ್ರವಾಸ

12:47 PM May 07, 2017 | |

ಮೈಸೂರು: ರಾಜ್ಯದಲ್ಲಿ ಬರ ವೀಕ್ಷಣೆ ಹಾಗೂ ಸಂಘಟನೆ ಬಲಪಡಿಸುವ ಸಂಬಂಧ ಮೇ 18ರಿಂದ ರಾಜ್ಯ ಪ್ರವಾಸಕ್ಕೆ ನಿರ್ಣಯ ಕೈಗೊಳ್ಳಲಾಗಿದ್ದು, ಎಷ್ಟು ತಂಡಗಳಲ್ಲಿ ಹೊರಡಬೇಕು? ಯಾರ್ಯಾರು ತಂಡದ ನೇತೃತ್ವ ವಹಿಸಬೇಕು? ಯಾವ ತಂಡ ಯಾವ ಭಾಗಕ್ಕೆ ಪ್ರವಾಸ ಕೈಗೊಳ್ಳಬೇಕು ಎಂಬುದು ಭಾನುವಾರ ಅಂತಿಮಗೊಳ್ಳಲಿದೆ.

Advertisement

ಇದರ ಜತೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಅಂತ್ಯ ಹಾಡುವ ಮೂಲಕ ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸುವ ಸಂಬಂಧ ರಾಜ್ಯ ಉಳಿಸಲು- ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಲು ಬಿಜೆಪಿ ಕರೆ ಎಂಬ ರಾಜಕೀಯ ನಿರ್ಣಯವನ್ನು ಮೈಸೂರಿನಲ್ಲಿ ನಡೆಯು ತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೈಗೊಳ್ಳಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ವರ್ಗಾವಣೆ, ಮರಳು ದಂಧೆ, ಭ್ರಷ್ಟಾಚಾರದಲ್ಲಿ ಮುಳುಗಿದ್ದ ಸರ್ಕಾರ, ವಿಧಾನಸಭೆ  ಚುನಾವಣೆಗೆ ಇನ್ನೊಂದು ವರ್ಷ ಇರುವಾಗ ಅನೇಕ ರೀತಿಯ ಚುನಾವಣಾ ಗಿಮಿಕ್‌ಗಳನ್ನು ಆರಂಭಿಸಿ, ರಾಜ್ಯದ ಜನತೆಗೆ ಮಂಕುಬೂದಿ ಎರಚುತ್ತಿದೆ.

ದೆಹಲಿಯ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ನಡೆಸಿರುವ ಸಮೀಕ್ಷೆಯ ಪ್ರಕಾರ 20 ರಾಜ್ಯಗಳಲ್ಲಿ ಕರ್ನಾಟಕ ಸರ್ಕಾರಿ ಸೇವೆ ಪಡೆಯಲು ಜನರು ಲಂಚ ನೀಡಲೇಬೇಕಾದ ಅನಿವಾರ್ಯತೆ ಇರುವ ಮೊದಲ ರಾಜ್ಯ ಎನ್ನುವ ಕುಖ್ಯಾತಿಗಳಿಸಿದೆ. ನೀತಿಗೆಟ್ಟ ಈ ಸರ್ಕಾರವನ್ನು ಕಿತ್ತೂಗೆದು ರಾಜ್ಯದಲ್ಲಿ ಜನಪರ ಮತ್ತು ಅಭಿವೃದ್ಧಿಪರವಾದ ಬಿಜೆಪಿ ಸರ್ಕಾರವನ್ನು ಸ್ಥಾಪಿಸಲು ನಾವೆಲ್ಲರೂ ಸಂಕಲ್ಪ$ ಮಾಡುವಂತೆ ಸಭೆಯಲ್ಲಿ ಕರೆ ನೀಡಲಾಗಿದೆ.

ನೋಟು ರದ್ದತಿಯ ಸಂದರ್ಭದಲ್ಲಿ ರಾಜ್ಯದ ಸಚಿವರು, ಆಡಳಿತ ಪಕ್ಷದ ಶಾಸಕರು, ಕಾಂಗ್ರೆಸ್‌ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಭಾರೀ ಪ್ರಮಾಣದ ಹೊಸ ನೋಟುಗಳು ಪತ್ತೆಯಾಗಿದ್ದು, ಕೇಂದ್ರ ಸರ್ಕಾರ ಪ್ರತಿ ಕೇಜಿಗೆ 32 ರೂ. ನಂತೆ ಅಕ್ಕಿ ಖರೀದಿಸಿ ರಾಜ್ಯಕ್ಕೆ ಸಬ್ಸಿಡಿ ದರದಲ್ಲಿ ಕೇವಲ 3 ರೂ.ಗೆ ನೀಡುತ್ತಿದ್ದರೂ ರಾಜ್ಯಸರ್ಕಾರ ಈ ಕಾರ್ಯಕ್ರಮ ಸಂಪೂರ್ಣ ತನ್ನದೆಂದು ಪ್ರಚಾರ ಪಡೆಯುತ್ತಿರುವುದು,

Advertisement

ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಮೀಸಲಾತಿ ಶೇ.50 ಮೀರಬಾರದು ಎಂದಿದ್ದರೂ ಶೇ.72ಕ್ಕೆ ಹೆಚ್ಚಿಸುವುದಾಗಿ ಹೇಳಿ ಹಿಂದುಳಿದ ವರ್ಗದ ಜನರ ಮೂಗಿಗೆ ತುಪ್ಪ ಸುರಿಯುವ ಯತ್ನ, ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ, ವಕ್ಫ್ ಆಸ್ತಿ ಕಬಳಿಕೆ ಸಂಬಂಧಿಸಿದ ಅನ್ವರ್‌ ಮಾಣಿಪ್ಪಾಡಿ ವರದಿ ಮಂಡನೆ ಮಾಡದಿರುವುದರ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳುವುದು,

ದೇವಾಲಯಕ್ಕೆ ನೆರವು ಕೋರಿ ಬಂದವರಿಗೆ ಬರಗಾಲದ ನೆಪ ಹೇಳಿ, ಮಸೀದಿ ನವೀಕರಣಕ್ಕೆ 1 ಕೋಟಿ ಅನುದಾನ ಘೋಷಿಸಿರುವ ಮುಖ್ಯಮಂತ್ರಿಯ ಹಿಂದೂ ವಿರೋಧಿ ನೀತಿ, ಪೊಲೀಸ್‌ ಪೇದೆಗಳು ವಿಭೂತಿ, ಕುಂಕುಮ ಧರಿಸುವಂತಿಲ್ಲ ಎಂಬ ನಿಯಮಕ್ಕೆ ಖಂಡನೆ, ಭ್ರಷ್ಟಾಚಾರದಲ್ಲಿ ಸಿಲುಕಿದ ಮಂತ್ರಿಗಳನ್ನು ರಕ್ಷಿಸಲು ಎಸಿಬಿ ದುರ್ಬಳಕೆ, ಮುಖ್ಯಮಂತ್ರಿ ಪುತ್ರನ ಸಲುವಾಗಿ ಆಡಳಿತಾತ್ಮಕ ಹುದ್ದೆ ಸೃಷ್ಟಿಸಿರುವುದರ ವಿರುದ್ಧ ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಜತೆಗೆ ಪಂಡಿತ್‌ ದೀನ್‌ ದಯಾಳ್‌ ಉಪಾ ಧ್ಯಾಯರ ಜನ್ಮ ಶತಾಬ್ದಿ ವರ್ಷಾಚರಣೆ ಹಿನ್ನೆಲೆಯಲ್ಲಿ ಜೂ.1ರಿಂದ 15ರ ವರೆಗೆ ಯಡಿಯೂರಪ್ಪಸೇರಿದಂತೆ ರಾಜ್ಯದ ಎಲ್ಲ ಮುಖಂಡರು ಪಕ್ಷ ಸೂಚಿಸಿದ ಕ್ಷೇತ್ರದಲ್ಲಿ ವಿಸ್ತಾರಕರಾಗಿ ಕೆಲಸ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next