Advertisement
ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡುವ ಮೂಲಕ ಅವರನ್ನು ವರಿಷ್ಠರು ನಿರ್ಲಕ್ಷ್ಯ ಮಾಡಿಲ್ಲ ಎಂಬ ಸಂದೇಶ ರವಾನೆ ಮಾಡಲಾಗಿದೆ. ಜತೆಗೆ ರಾಜಕೀಯ ಮುಖ್ಯವಾಹಿನಿಗೆ ಕರೆತರಲಾಗಿದೆ.
Related Articles
Advertisement
ಕೊರತೆ ಮಾಡಿಲ್ಲಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ದೊರೆತ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ವರಿಷ್ಠರು ನನಗೆ ಯಾವುದೇ ಕೊರತೆ ಮಾಡಿಲ್ಲ, ನನ್ನನ್ನು ಸಂತೈಸಲು ಸ್ಥಾನಮಾನ ಕೊಟ್ಟಿಲ್ಲ. ರಾಜ್ಯದಲ್ಲಿ ಬಿಜೆಪಿ ಬಿಟ್ಟು ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ನಾನೂ ಸೇರಿ ಎಲ್ಲರೂ ಸಾಮೂಹಿಕ ನಾಯಕತ್ವದಡಿ ಪಕ್ಷ ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು ದೊಡ್ಡ ಸ್ಥಾನ ನೀಡಿದ್ದಾರೆ. ಯಾವುದೇ ಸ್ಥಾನ ಅಪೇಕ್ಷೆ ಪಟ್ಟ ವ್ಯಕ್ತಿ ನಾನಲ್ಲ. ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಅಪೇಕ್ಷೆ ಇತ್ತು. ಈಗ ಪಕ್ಷದ ನಾಯಕರು ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಪಕ್ಷದ ಆದೇಶವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಹಾಗೂ ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆ ಮಾಡಲು ಪ್ರವಾಸ ಮಾಡುತ್ತೇನೆ ಎಂದು ಹೇಳಿದರು. ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಯಾವತ್ತೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ನಾನೆ ಉದಾಹರಣೆ. ರಾಜ್ಯದಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ರಾಜ್ಯದಲ್ಲಿ ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುತ್ತೇವೆ. ನನಗೆ ಹೆಚ್ಚಿನ ಜವಾಬ್ದಾರಿ ನೀಡಿದರೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎನ್ನುವ ನಂಬಿಕೆ ಪಕ್ಷದ ಹೈಕಮಾಂಡ್‌ಗೆ ಇದೆ. ಅ ನಂಬಿಕೆಯಿಂದ ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿಸಿದರು. ಸಾಮೂಹಿಕ ನಾಯಕತ್ವ
ಮುಂಬರುವ ವಿಧಾನಸಭೆ ಚುನಾವಣೆಯನ್ನು ರಾಜ್ಯದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ನಾಯಕರು. ಅವರನ್ನು ಮುಂದಿಟ್ಟುಕೊಂಡು ಎಲ್ಲರೂ ಸೇರಿ ಚುನಾವಣೆ ಎದುರಿಸುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ರಾಜ್ಯದಲ್ಲಿ ಯಾರು ಈಗಾಗಲೇ ಅಧಿಕಾರಕ್ಕೆ ಬಂದಿದ್ದೇವೆ ಎಂದು ಕನಸು ಕಾಣುತ್ತಿದಾರೋ ಅವರ ಕನಸು ನನಸಾಗಲು ಬಿಡುವುದಿಲ್ಲ. ಪಕ್ಷದ ನಾಯಕರು ಯಾವ ರೀತಿ ಸೂಚಿಸುತ್ತಾರೋ ಅದರಂತೆ ರಾಜ್ಯ ಪ್ರವಾಸ ಮಾಡಿ, ರಾಜ್ಯದಲ್ಲಿ 140 ಸ್ಥಾನಗಳನ್ನು ಗೆದ್ದುಕೊಂಡು ಬಂದು ಬಿಜೆಪಿಯನ್ನು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರವಹಿಸುತ್ತೇನೆ ಎಂದು ಹೇಳಿದರು. ಸರ್ಕಾರ ಮತ್ತು ಪಕ್ಷದಲ್ಲಿ ಕೆಲವೊಂದು ಬದಲಾವಣೆಗಳನ್ನು ಅಗತ್ಯಕ್ಕೆ ತಕ್ಕಂತೆ ಪಕ್ಷದ ಹೈಕಮಾಂಡ್ ನಾಯಕರು ಮಾಡುತ್ತಾರೆ. ಅದು ನಿರಂತರ ಪ್ರಕ್ರಿಯೆಯಾಗಿದ್ದು, ಅದರಿಂದ ಪಕ್ಷ ಹಾಗೂ ಸರ್ಕಾರದ ಮೇಲೆ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಹೇಳಿದರು. ಕಳೆಗಟ್ಟಿದ ಕಾವೇರಿ
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ಅವರು ವಾಸವಾಗಿರುವ ಕಾವೇರಿ ನಿವಾಸ ಬಿಕೋ ಎನ್ನುತ್ತಿತ್ತು. ಬುಧವಾರ ಯಡಿಯೂರಪ್ಪ ಅವರಿಗೆ ಪಕ್ಷದ ಕೇಂದ್ರ ಸಮಿತಿಯಲ್ಲಿ ಉನ್ನತ ಸ್ಥಾನ ದೊರೆತ ಸುದ್ದಿ ಹೊರ ಬೀಳುತ್ತಿರುವಂತೆಯೇ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಹಾಗೂ ಬಿಎಸ್‌ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಸಚಿವರು ಹಾಗೂ ಶಾಸಕರು ಆಗಮಿಸಿ ಶುಭ ಕೋರಿದರು. ಯಡಿಯೂರಪ್ಪ ಅವರಿಗೆ ಮಹತ್ವದ ಹುದ್ದೆ ಲಭಿಸಿರುವುದಕ್ಕೆ ಎಲ್ಲರೂ ಉತ್ಸಾಹದಲ್ಲಿದ್ದರು. ಈ ಮೂಲಕ ಬಿಕೋ ಎನ್ನುತ್ತಿದ್ದ ಕಾವೇರಿ ನಿವಾಸಕ್ಕೆ ಮತ್ತೆ ಕಳೆ ಬಂದಂತಾಗಿತ್ತು. ವಿಜಯೇಂದ್ರ ಸಂತಸ:
ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಮಹತ್ವದ ಸ್ಥಾನ ದೊರೆತಿರುವುದಕ್ಕೆ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಸಂತಸಗೊಂಡಿದ್ದಾರೆ. ಪಕ್ಷದಲ್ಲಿ ತಮ್ಮ ತಂದೆ ಹಾಗೂ ತಮಗೆ ಸರಿಯಾಗಿ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವ ಕೊರಗಿನ ನಡುವೆ ಯಡಿಯೂರಪ್ಪ ಅವರಿಗೆ ಪಕ್ಷದ ಹೈಕಮಾಂಡ್ ನಾಯಕರು ಮತ್ತೆ ಉನ್ನತ ಸ್ಥಾನ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಅವರಿಗೆ ಧನ್ಯವಾದ ತಿಳಿಸಿದರು. ಯಡಿಯೂರಪ್ಪ ಅವರಿಗೆ ಮಹತ್ವದ ಜವಾಬ್ದಾರಿ ನೀಡಿರುವುದರಿಂದ ರಾಜ್ಯ ಬಿಜೆಪಿಯಲ್ಲಿಯೂ ಉತ್ಸಾಹ ಹೆಚ್ಚಾಗಿದ್ದು, ಇದು ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರೇರಣೆ ನೀಡಿದೆ ಎಂದು ಹೇಳಿದರು. ಹುದ್ದೆ ಹಿಂದಿನ ಕಾರ್ಯತಂತ್ರ
– ಬಿಎಸ್‌ವೈ ನಿರ್ಲಕ್ಷ್ಯ ಮಾಡಿಲ್ಲ ಎಂಬ ಸಂದೇಶ ರವಾನೆ
– ಲಿಂಗಾಯಿತ ಮತಬ್ಯಾಂಕ್ ಹಿಡಿದಿಟ್ಟುಕೊಳ್ಳುವ ಕಾರ್ಯತಂತ್ರ
– ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗುವಂತೆ ಮಾಡುವುದು.
– ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಸೆಡ್ಡು ಹೊಡೆಯುವುದು
– ರಾಷ್ಟ್ರ ಮಟ್ಟದ ನಾಯಕನಾಗಿ ಅವಕಾಶ ಕೊಟ್ಟಿರುವ ಸಮರ್ಥನೆ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ನನ್ನನ್ನು ಸದಸ್ಯನಾಗಿ ನೇಮಿಸಿರುವ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆಗಳು. ನಮ್ಮ ಪಕ್ಷದ ಉನ್ನತ ಮಟ್ಟದ ಸಮಿತಿಯಲ್ಲಿ ಸೇವೆ ಸಲ್ಲಿಸುವ ಈ ಗೌರವಕ್ಕಾಗಿ ನಾನು ಅಭಾರಿಯಾಗಿದ್ದೇನೆ.
– ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಕುಟುಕು
ಯಡಿಯೂರಪ್ಪ ಅವರನ್ನು ಬಿಜೆಪಿಯ ಸಂಸದೀಯ ಸಮಿತಿಗೆ ಕಳುಹಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವಲ್ಲಿ ಯಶಸ್ವಿ ಹೆಜ್ಜೆಯನ್ನಿಟ್ಟಿದೆ “ಸಂತೋಷ ಕೂಟ’ ಯಡಿಯೂರಪ್ಪ ಅವರೀಗ ಅಧಿಕೃತವಾಗಿ ಮಾರ್ಗದರ್ಶಕ ಮಂಡಳಿ ಸೇರಿದಂತಾಯಿತು. ಅವರನ್ನು ಮುಗಿಸಿಹಾಕುವ ಡಿಮೋಷನ್ ಕೊಟ್ಟು ಪ್ರಮೋಚನೆ ಎಂಬಂತೆ ಬಿಂಬಿಸುತ್ತಿದೆ.
– ಕಾಂಗ್ರೆಸ್ ಟ್ವೀಟ್ ಬಿಎಸ್‌ವೈ, ಸಂತೋಷ್‌ಗೆ ಸ್ಥಾನ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಅವರು ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಬಿಜೆಪಿಯ ಪ್ರಮುಖ ಎರಡು ಮಂಡಳಿಗಳನ್ನು ಪುನಾರಚನೆ ಮಾಡಲಾಗಿದ್ದು, ಈ ಎರಡರಲ್ಲೂ ರಾಜ್ಯದ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ಎಲ್.ಸಂತೋಷ್ ಅವರು ಸ್ಥಾನ ಪಡೆದಿದ್ದಾರೆ. ಆದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಅವರನ್ನು ಕೈಬಿಡಲಾಗಿದೆ. ಬಿಜೆಪಿ ಸಂಸದೀಯ ಮಂಡಳಿ
ಜೆ.ಪಿ.ನಡ್ಡಾ, ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಬಿ.ಎಲ್.ಸಂತೋಷ್, ಸರ್ವಾನಂದ್ ಸೋನಾವಾಲ್, ಬಿ.ಎಸ್.ಯಡಿಯೂರಪ್ಪ, ಕೆ.ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ಪುರ, ಸತ್ಯನಾರಾಯಣ್ ಜಾಟಿಯ, ಸುಧಾ ಯಾದವ್. (ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಹೊರಕ್ಕೆ) ಕೇಂದ್ರ ಚುನಾವಣಾ ಸಮಿತಿ
ಸಂಸದೀಯ ಮಂಡಳಿ ಸದಸ್ಯರ ಜತೆಗೆ, ದೇವೇಂದ್ರ ಫಡ್ನವೀಸ್, ಭೂಪೇಂದರ್ ಯಾದವ್, ಓಂ ಮಾಥೂರ್, ವನಥಿ ಶ್ರೀನಿವಾಸನ್.(ಶಹನವಾಜ್ ಹುಸೇನ್, ಜುವಾಲ್ ಓರಮ್ ಹೊರಕ್ಕೆ)