ನವದೆಹಲಿ: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸುವ ಮೂಲಕ 6ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿ ದಾಖಲೆ ನಿರ್ಮಿಸಲಿದೆ ಎಂದು ಟೈಮ್ಸ್ ನೌ ಮತ್ತು ವಿಎಂಆರ್ ನಡೆಸಿದ ಮತದಾರರ ಅಭಿಪ್ರಾಯ ಸಮೀಕ್ಷೆಯಲ್ಲಿ ತಿಳಿಸಿದೆ.
182 ಸ್ಥಾನಗಳನ್ನು ಹೊಂದಿರುವ ಗುಜರಾತ್ ವಿಧಾನಸಭೆಯಲ್ಲಿ, ಮತದಾರರ ಸಮೀಕ್ಷೆ ಪ್ರಕಾರ ಬಿಜೆಪಿ 118ರಿಂದ 134 ಸ್ಥಾನ ಪಡೆಯಲಿದೆ. 2012ರಲ್ಲಿ ಬಿಜೆಪಿ 115 ಸ್ಥಾನದಲ್ಲಿ ಜಯ ಗಳಿಸಿದ್ದರೆ, ಈ ಬಾರಿ ಅತ್ಯಧಿಕ ಸ್ಥಾನ ಪಡೆಯಲಿದೆ ಎಂದು ಹೇಳಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 61 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಈ ಬಾರಿ 49ರಿಂದ 61 ಸ್ಥಾನ ಪಡೆಯುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ. ಬಿಜೆಪಿಗೆ ಶೇ.52, ಕಾಂಗ್ರೆಸ್‌ಗೆ ಶೇ.37 ಮತ್ತು ಉಳಿದ ಪಕ್ಷಗಳಿಗೆ ಶೇ.11ರಷ್ಟು ಮತ ಹಂಚಿಕೆಯಾಗಲಿದೆ.
ಕಾಂಗ್ರೆಸ್ ಪಕ್ಷದ ಮತ ಕಳೆದ ಬಾರಿ ಶೇ.39ರಷ್ಟು ಪಡೆದಿದ್ದರೆ, ಈ ಬಾರಿ ಶೇ.37ರಷ್ಟು ಗಳಿಸುವ ಮೂಲಕ ಶೇ.2ರಷ್ಟು ಮತ ಕಡಿಮೆಯಾಗಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಅಲ್ಲದೇ ಕಳೆದ 5 ವರ್ಷಗಳ ಅವಧಿಯಲ್ಲಿ ಗುಜರಾತ್ ನ ಅತಿ ಉತ್ತಮ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಶೇ.67ರಷ್ಟು ಮತದಾರರು ನರೇಂದ್ರ ಮೋದಿ ಎಂಬುದಾಗಿ ಉತ್ತರಿಸಿದ್ದು, ಶೇ.20ರಷ್ಟು ಆನಂದಿಬೆನ್ ಪಟೇಲ್ ಹಾಗೂ ಶೇ.13ರಷ್ಟು ಮತದಾರರು ವಿಜಯ್ ರೂಪಾನಿ ಎಂದು ತಿಳಿಸಿದ್ದಾರೆ.
ಗುಜರಾತ್ ನಲ್ಲಿ ಸರ್ಕಾರ ರಚಿಸಲು ಯಾವ ಪಕ್ಷ ಅರ್ಹ ಎಂಬುದಕ್ಕೆ ಶೇ.50ರಷ್ಟು ಮತದಾರರು ಬಿಜೆಪಿ ಎಂದು ಹೇಳಿದ್ದರೆ, ಶೇ.44ರಷ್ಟು ಕಾಂಗ್ರೆಸ್ ಎಂದು ಅ ಭಿಪ್ರಾಯವ್ಯಕ್ತಪಡಿಸಿದ್ದಾರೆ. ಶೇ.ರಷ್ಟು ಜನ್ ವಿಕಲ್ಪ, ಶೇ.1ರಷ್ಟು ಆಪ್ ಹಾಗೂ ಶೇ.3ರಷ್ಟು ಇತರೆ ಎಂದು ಸಮೀಕ್ಷೆ ತಿಳಿಸಿದೆ.