Advertisement

ಹಲವು ದಶಕಗಳ ಕಾಲ ಬಿಜೆಪಿ ಇನ್ನೂ ಬಲಿಷ್ಠ: ಪ್ರಶಾಂತ್‌ ಕಿಶೋರ್‌

12:06 AM Oct 29, 2021 | Team Udayavani |

ಪಣಜಿ/ಕೋಲ್ಕತಾ:  “ಬಿಜೆಪಿಯು ಅಧಿಕಾರದಲ್ಲಿ ಇರಲಿ, ಬಿಡಲಿ, ಇನ್ನೂ ಕೆಲವು ದಶಕಗಳ ಕಾಲ ಭಾರತದ ರಾಜಕೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸುವುದಂತೂ ನಿಶ್ಚಿತ. ಆದರೆ ಇದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ಅರ್ಥವಾ­ಗುತ್ತಿಲ್ಲ’ ಎಂದು ರಾಜಕೀಯ ವಿಶ್ಲೇಷಕ, ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

Advertisement

“ಪ್ರಧಾನಿ ಮೋದಿಯವರ ಬಗ್ಗೆ ಜನರಲ್ಲಿ ಒಂದು ಅಸಹನೆ ಸೃಷ್ಟಿಯಾ­ಗಿದ್ದು,  ಅದು ನಿಧಾನವಾಗಿ ಹೆಚ್ಚಾಗು­ತ್ತಿದೆ. ಈ ಅಸಮಾಧಾನ ಜ್ವಾಲಾಮುಖೀಯಂತೆ ಸ್ಫೋಟಗೊಂಡು, ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ಜನರೇ ಕೆಳಗಿಳಿಸುತ್ತಾರೆ ಎಂಬುದು ಒಂದು ದೊಡ್ಡ ಭ್ರಮೆ ಎಂದು ಹೆಸರಾಂತ ಚುನಾವಣ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ತಿಳಿಸಿದ್ದಾರೆ.

ಗೋವಾದಲ್ಲಿ ಚುನಾವಣ ಪ್ರಚಾರಕ್ಕಾಗಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರು ಆಗಮಿ ಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಪಣಜಿಯಲ್ಲಿ ಬುಧವಾರ ನಡೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೋದಿಯವರನ್ನು ಜನರು ಅಧಿಕಾರದಿಂದ ಕಿತ್ತೂಗೆಯುತ್ತಾರೆ ಎಂಬುದಂತೂ ಸುಳ್ಳು. ಹಾಗೊಮ್ಮೆ ಮೋದಿಯವರ ಪದಚ್ಯುತಿಯಾದರೂ ಬಿಜೆಪಿಯಂತೂ ಕೇಂದ್ರ ದಲ್ಲಿ ಅಧಿಕಾರದಲ್ಲಿರುತ್ತದೆ.

ಅಷ್ಟರಮಟ್ಟಿಗೆ ಆ ಪಕ್ಷದ ವರ್ಚಸ್ಸು, ಪ್ರಾಮುಖ್ಯ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ನಿರ್ಮಾಣ ವಾಗಿದೆ. ಇದು ಹೇಗೆಂದರೆ, ಸ್ವಾತಂತ್ರ್ಯಾ ನಂತರ ಸತತ ನಾಲ್ಕು ದಶಕಗಳಲ್ಲಿ ಕಾಂಗ್ರೆಸ್‌ ಹೇಗೆ ಈ ರಾಜಕೀಯ ರಂಗದಲ್ಲಿ ಅಭೇದ್ಯ ಕೋಟೆ ಯಂತಿತ್ತೋ ಹಾಗೆಯೇ ಇನ್ನು ಮುಂದೆ ಬಿಜೆಪಿಯೂ ಇರಲಿದೆ’  ಎಂದಿದ್ದಾರೆ. “ರಾಹುಲ್‌ ಗಾಂಧಿಯವರಿಗೆ ಈ ವಿಚಾರ ಅರ್ಥವಾಗುವುದೇ ಇಲ್ಲ. ಇದೇ ಅವರ ಸಮಸ್ಯೆ. ಅವರು, ಮೋದಿ ಅವರ ಜನಪ್ರಿಯತೆ ಕೇವಲ ತಾತ್ಕಾಲಿಕ. ಸದ್ಯದಲ್ಲೇ ಅವರ ಜನಪ್ರಿಯತೆ ಕುಸಿಯಲಿದೆ ಎಂದು ಭಾವಿಸಿದ್ದಾರೆ’ ಎಂದಿದ್ದಾರೆ.

Advertisement

ಮೂರು ದಿನಗಳ ಭೇಟಿ: 2022ರಲ್ಲಿ ನಡೆಯಲಿ­ರುವಗೋವಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಲಿರುವ ಟಿಎಂಸಿಗೆ ಸೂಕ್ತ ವೇದಿಕೆಯನ್ನು ಸಜ್ಜುಗೊಳಿಸಲು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಮೂರು ದಿನಗಳ ಭೇಟಿಯಾಗಿ ಗೋವಾಕ್ಕೆ ಆಗಮಿಸಿದ್ದಾರೆ. ಈ ಅವಧಿಯಲ್ಲಿ ಗೋವಾದ ಹಿರಿಯ ಸಮಾಜ ಚಿಂತಕರು, ಉದ್ಯೋಗ ವಲಯದ ಪ್ರತಿನಿಧಿಗಳು, ಬುದ್ಧಿ ಜೀವಿಗಳ ಜತೆಗೆ ಅವರು ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗಿದೆ.

ಮಮತಾ ಬ್ಯಾನರ್ಜಿಯವರು ತಮ್ಮನ್ನು ಬಂಗಾಲಿ ಎಂದು ಹೇಳಿಕೊಳ್ಳುತ್ತಾರೆ. ಪಶ್ಚಿಮ ಬಂಗಾಲದಲ್ಲಿ ಸ್ಥಳೀಯರನ್ನು ಉಳಿದವರೆಲ್ಲರೂ ಹೊರಗಿನವರು ಎನ್ನುತ್ತಾರೆ. ಹೀಗಿರುವಾಗ  ಅನ್ಯರಾಜ್ಯವಾದ ಗೋವಾದಲ್ಲಿ ಟಿಎಂಸಿ ಏಕೆ ಸ್ಪರ್ಧಿಸುತ್ತಿದೆ. ಟಿಎಂಸಿ ಹೊರಗಿನ ಪಕ್ಷವಲ್ಲವೇ?-ಸೌಮಿತ್ರಾ ಖಾನ್‌, ಬಿಜೆಪಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next