Advertisement

ರಥಯಾತ್ರೆಗೆ ಆರ್‌ಎಸ್‌ಎಸ್‌ ಸಹಕಾರ ಕೋರಿದ ಬಿಜೆಪಿ

09:16 AM Sep 22, 2017 | |

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು, ಅಧಿಕಾರಕ್ಕೇರುವ ಹಂಬಲದಲ್ಲಿರುವ ಬಿಜೆಪಿ ಮುಖಂಡರು, ಗುರುವಾರ ಸಂಘ ಪರಿವಾರದ ಸಂಘಟನೆಗಳ ನಡುವೆ ನಡೆದ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಹತ್ವದ ಮಾತುಕತೆ ನಡೆಸಿದರು.  

Advertisement

ನವೆಂಬರ್‌ 2ರಿಂದ ಕೈಗೊಂಡಿರುವ ನವಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ, ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಸೆ.26ರಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಗೆ ಸಹಕಾರ ಕೋರಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಅದರ ಸಹ ಸಂಘಟನೆಗಳ ಸಮನ್ವಯ ಬೈಠಕ್‌ ಚಾಮರಾಜಪೇಟೆಯ ಕೇಶವಕೃಪಾದಲ್ಲಿ ನಡೆಯಿತು. ಬೈಠಕ್‌ನಲ್ಲಿ ವಿಶ್ವಹಿಂದೂ ಪರಿಷತ್‌, ಬಿಜೆಪಿ, ಎಬಿವಿಪಿ, ಬಿಎಂಎಸ್‌, ವಿದ್ಯಾಭಾರತಿ, ಸಂಸ್ಕಾರ ಭಾರತಿ, ಸಂಸ್ಕೃತ ಭಾರತಿ, ಬಾಲಗೋಕುಲ, ವನವಾಸಿ ಕಲ್ಯಾಣ ಸೇರಿ 50ಕ್ಕೂ ಹೆಚ್ಚು ಸಹ ಸಂಘಟನೆಗಳು ಭಾಗವಹಿಸಿ ಸಂಘಟನೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಆರ್‌ಎಸ್‌ಎಸ್‌ ಪ್ರಮುಖರಿಗೆ ನೀಡಿದರು.

ಸಭೆಯಲ್ಲಿ ಬಿಜೆಪಿ ಪರವಾಗಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಆರ್‌.ಅಶೋಕ್‌, ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಮತ್ತಿತರರು ಭಾಗವಹಿಸಿದ್ದರು. ನ.2ರಿಂದ ಬಿಜೆಪಿ ಕೈಗೊಂಡಿರುವ ನವಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ, ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಸೆ. 26ರಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಕುರಿತು ಮುಖಂಡರು ಸಭೆಯಲ್ಲಿ ಮಾಹಿತಿ ನೀಡಿ ಇದಕ್ಕೆ ಇತರ ಸಂಘಟನೆಗಳ ಸಹಕಾರ ಕೋರಿದರು ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗದಿಂದಲೇ ನನ್ನ ಸ್ಪರ್ಧೆ
ವಿಜಯಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಶಿವಮೊಗ್ಗ ಕ್ಷೇತ್ರದಿಂದಲೇ ಸ್ಪ ರ್ಧಿಸುವುದಾಗಿ ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ರಾಜ್ಯದ 224 ಕ್ಷೇತ್ರಗಳಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಹೀಗಾಗಿ, ಹೈಕಮಾಂಡ್‌ ಸೂಚನೆ ಮೇರೆಗೆ ಬಿ.ಎಸ್‌.ಯಡಿಯೂರಪ್ಪ ಅವರು ವಿಜಯಪುರ ಜಿಲ್ಲೆ ಸೇರಿ ಉತ್ತರ ಕರ್ನಾಟಕದ ಯಾವುದಾದರೂ ಜಿಲ್ಲೆಯ ಒಂದು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇವರ ಹೊರತಾಗಿ ಇತರ ಯಾವ ನಾಯಕರಿಗೂ ಕ್ಷೇತ್ರ ಬದಲಾವಣೆ ಸೂಚನೆ ಇಲ್ಲ. ನಾನು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದರು.

ಬೆಳಗಾವಿ ಮುಖಂಡರೊಂದಿಗೆ ಬಿ.ಎಸ್‌. ಯಡಿಯೂರಪ್ಪ ಸಭೆ ಬೆಂಗಳೂರು: ಬೂದಿ ಮುಚ್ಚಿದ ಕೆಂಡದಂತಿರುವ ಬೆಳಗಾವಿ
ಜಿಲ್ಲಾ ಬಿಜೆಪಿಯಲ್ಲಿ ಒಗ್ಗಟ್ಟು ಮೂಡಿಸುವ ಸಲುವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ 
ಪಕ್ಷದ ಜಿಲ್ಲಾ ಮುಖಂಡರೊಂದಿಗೆ ಸಮಾಲೋಚನೆ ಮಾಡಿ, ಒಟ್ಟಾಗಿ ಹೋಗುವಂತೆ ಸಲಹೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ಅದಕ್ಕೆ ನಿಮ್ಮೆಲ್ಲರ ಪ್ರಯತ್ನ ಕಾರಣ. ಆದರೆ, ಸಣ್ಣ ಪುಟ್ಟ ವಿಚಾರಗಳಿಗೆ ಮುನಿಸಿಕೊಂಡರೆ ಸಂಘಟನೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮುಂದೆ ಯಾವುದೇ ಅಸಮಾಧಾನಕ್ಕೆ ಕಾರಣವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದೆಂದು ಕಿವಿಮಾತು ಹೇಳಿದರು ಎನ್ನಲಾಗಿದೆ.

Advertisement

ಸಾಲಮನ್ನಾಕ್ಕೆ 16 ಷರತ್ತು ವಿಧಿಸಿರುವ ರಾಜ್ಯ ಸರ್ಕಾರದ ಕ್ರಮ ರೈತರಿಗೆ ಲಾಲಿಪಪ್‌ ನೀಡಿದಂತಾಗಿದೆ. ಅನೇಕ ರಾಜ್ಯಗಳು ಸಹಕಾರ ಹಾಗೂ ರಾಷ್ಟ್ರೀಯ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿವೆ. ಆದರೆ ರಾಜ್ಯ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡದೇ ರಾಜಕೀಯ ಮಾಡುತ್ತಿದೆ.
●ಪ್ರಕಾಶ ಜಾವಡೇಕರ್‌, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿಯೂ ನಾನೇ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರು ಹೇಳಿದ ತಕ್ಷಣ ಏನೂ ಆಗುವುದಿಲ್ಲ. ಯಾರು ಮುಖ್ಯಮಂತ್ರಿ ಎಂಬುದನ್ನು ಜನ ನಿರ್ಧರಿಸುತ್ತಾರೆ.
●ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next