Advertisement

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

12:50 PM Mar 17, 2017 | |

ದಾವಣಗೆರೆ: ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ಮಹಿಳೆಯರು, ದಲಿತರಿಗೆ ಸೂಕ್ತ ರಕ್ಷಣೆ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. 

Advertisement

ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ರಾಜ್ಯಪಾಲರಿಗೆ ಕಳುಹಿಸಲು ಮನವಿ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ದಲಿತರು, ಮಹಿಳೆಯರು ಒಳಗೊಂಡಂತೆ ಯಾರಿಗೂ ಸೂಕ್ತ ರಕ್ಷಣೆಯೇ ಇಲ್ಲ.

ಪ್ರತಿದಿನ ಹಲ್ಲೆ, ಕೊಲೆ, ಅತ್ಯಾಚಾರ ನಡೆಯುತ್ತಲೇ ಇವೆ. ಇಡೀ ನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ಈಚೆಗೆ ನಡೆದ ಬೊಮ್ಮಸಂದ್ರ ಪುರಸಭೆ ಬಿಜೆಪಿ ಸದಸ್ಯ ಶ್ರೀನಿವಾಸ್‌ ಪ್ರಸಾದ್‌ ಅಲಿಯಾಸ್‌ ಕಿತ್ತಾಗನಹಳ್ಳಿ ವಾಸು ಅವರ ಕೊಲೆಯೇ ಸಾಕ್ಷಿ.

ದಲಿತ ಮುಖಂಡ ವಾಸು ಪುರಸಭೆ ಅಧ್ಯಕ್ಷರಾಗುವುದನ್ನು ತಪ್ಪಿಸುವ ಉದ್ದೇಶದಿಂದಲೇ ಅವರನ್ನು ಕೊಲೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರ ಹತ್ಯೆ, ದೌರ್ಜನ್ಯ, ಹಲ್ಲೆ ನಡೆಸುವ ಮೂಲಕ ಪಕ್ಷದ ಸಂಘಟನೆ, ಹೋರಾಟ ಹತ್ತಿಕ್ಕಬಹುದು ಎಂಬ ಲೆಕ್ಕಾಚಾರದೊಂದಿಗೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ.

ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕಡೆಬಿಜೆಪಿ ಮುಖಂಡರು, ಕಾರ್ಯಕರ್ತರ  ಹತ್ಯೆ, ದೌರ್ಜನ್ಯ, ಹಲ್ಲೆ ನಡೆದಿರುವುದೇ ಸಾಕ್ಷಿ. ಇಂತಹದ್ದಕ್ಕೆಲ್ಲಾ ಹೆದರುವ, ಬೆದರುವ ಮಾತೇ ಇಲ್ಲ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಪಕ್ಷ ಸಂಘಟನೆಯಾಗಲಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು. 

Advertisement

ರಾಜ್ಯದಲ್ಲಿ ಮಹಿಳೆಯರಿಗೂ ಸೂಕ್ತ ರಕ್ಷಣೆ ಇಲ್ಲ. ಬೆಂಗಳೂರಿನಲ್ಲಿ ಪ್ರತಿ ನಿತ್ಯ ಮಹಿಳೆಯರ ಮೇಲೆ ಕಿರುಕುಳ, ಹಲ್ಲೆ ನಡೆಯುತ್ತಲೇ ಇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರಾ ಉಡಾಫೆ ಉತ್ತರ ನೀಡುತ್ತಾರೆ. ಕಾನೂನು, ಸುವ್ಯವಸ್ಥೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡದೇ ಇರುವ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಅಗತ್ಯ ಸೂಚನೆ ನೀಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಮನವಿ ಮಾಡಿದರು. 

ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಎಚ್‌.ಸಿ. ಜಯಮ್ಮ, ಯುವ ಮೋರ್ಚಾದ ಪಿ.ಸಿ. ಶ್ರೀನಿವಾಸ್‌, ವೈ. ಮಲ್ಲೇಶ್‌, ಅಣಬೇರು ಜೀವನಮೂರ್ತಿ, ಸಂಕೋಳ್‌ ಚಂದ್ರಶೇಖರ್‌, ಸಹನಾ ರವಿ,ಜಯಪ್ರಕಾಶ್‌ ಕೊಂಡಜ್ಜಿ, ಆನಂದಪ್ಪ, ಕೆ.ಎಚ್‌. ಬಸವರಾಜ್‌, ಡಿ.ಎಸ್‌. ಶಿವಶಂಕರ್‌, ರಾಜನಹಳ್ಳಿ ಶಿವಕುಮಾರ್‌, ಎನ್‌. ರಾಜಶೇಖರ್‌, ಕೆ. ಹೇಮಂತ್‌ ಕುಮಾರ್‌ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next