ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತಾರೂಢ ಬಿಜೆಪಿ ರಾಜಕೀಯ ಪ್ರಚಾರದ ಅಖಾಡಕ್ಕೆ ಇಳಿದಿವೆ. ಈಗಾಗಲೇ ಕಾಂಗ್ರೆಸ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ, ಸಮಾವೇಶ ನಡೆಯುತ್ತಿದ್ದು, ಜೆಡಿಎಸ್ ಕುಮಾರಸ್ವಾಮಿ ನಾಯಕತ್ವದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ತೊಡಗಿಕೊಂಡಿದೆ. ಏತನ್ಮಧ್ಯೆ ಕಾಂಗ್ರೆಸ್, ಜೆಡಿಎಸ್ ಗೆ ಸೆಡ್ಡು ಹೊಡೆದಿರುವ ಬಿಜೆಪಿ ಫೆ.24ರಿಂದ ಪ್ರಗತಿ ರಥಯಾತ್ರೆಗೆ ಚಾಲನೆ ಕೊಡಲು ಸಜ್ಜಾಗಿದೆ.
ಇದನ್ನೂ ಓದಿ:ಜಗತ್ತಿನಲ್ಲಿ ಹಲವು ಬಗೆಯ ಚಹಾಗಳಿವೆ…ಏನಿದು ಮಚ್ಚಾ ಚಹಾ…ಆರೋಗ್ಯ ಪ್ರಯೋಜನಗಳೇನು?
ಫೆಬ್ರವರಿ 24ರಿಂದ ಎಲ್ ಇಡಿ ವಾಹನಗಳ ಮೂಲಕ ಪ್ರಚಾರ ಮಾಡುವ ಪ್ರಗತಿ ರಥದ ಕುರಿತು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನು ಪ್ರತಿ ಗ್ರಾಮಕ್ಕೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದೆ.
ಈಗಾಗಲೇ “ಪ್ರಗತಿ ರಥ”ಕ್ಕಾಗಿ ಎಲ್ ಇಡಿ ಸ್ಕ್ರೀನ್ ಇರುವ ಸುಮಾರು 135 ವಾಹನಗಳನ್ನು ಸಿದ್ದಪಡಿಸಲಾಗಿದೆ. ಈ ಪ್ರಗತಿ ರಥ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಲಿದೆ. ಈ ರಥದಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ (ಫೆ.24) ಪ್ರಗತಿ ರಥಕ್ಕೆ ಚಾಲನೆ ನೀಡಲಿದ್ದಾರೆ. ಈ ರಥದಲ್ಲಿ ಸಲಹಾ ಪೆಟ್ಟಿಗೆಗಳನ್ನೂ ಅಳವಡಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 10 ಸಾವಿರ ಜನರ ಸಲಹೆಗಳನ್ನು ನಿರೀಕ್ಷಿಸಲಾಗಿದೆ.
ಪ್ರಗತಿ ರಥಯಾತ್ರೆ ಸಂದರ್ಭದಲ್ಲಿ ಒಟ್ಟು 22.40 ಲಕ್ಷ ಸಲಹೆಗಳನ್ನು ನಿರೀಕ್ಷಿಸಲಾಗಿದೆ ಎಂದು ಪ್ರಗತಿ ರಥದ ಸಂಚಾಲಕ ಎಸ್.ವಿ.ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಂದು ರಥ ಕನಿಷ್ಠ 15 ದಿನಗಳ ಕಾಲ ಒಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಕರಾವಳಿ ಹಾಗೂ ಇತರ ವಿಧಾನಸಭಾ ಕ್ಷೇತ್ರಕ್ಕೆ ಒಂದು ಪ್ರಗತಿ ರಥ ಸಂಚರಿಸಲಿದೆ. ಉದ್ಯಾನನಗರಿಗೆ ಎರಡು ವಿಧಾನಭಾ ಕ್ಷೇತ್ರಗಳಿಗೆ ಒಂದು ರಥ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.
ಪ್ರಗತಿರಥದ ಸಹಸಂಚಾಲಕರನ್ನಾಗಿ ಮಂಗಳೂರಿನ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಘವೇಂದ್ರ ಮಾಹಿತಿ ನೀಡಿದ್ದು, ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ ಉಪಸ್ಥಿತರಿದ್ದರು.