ನವದೆಹಲಿ: ಮುಂಬರುವ ಪಂಜಾಬ್ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪಂಜಾಬ್ ಬಿಜೆಪಿ ಘಟಕದ ಅಧ್ಯಕ್ಷ ಸುನಿಲ್ ಜಾಖರ್ ಮಂಗಳವಾರ (ಮಾರ್ಚ್ 26) ಘೋಷಿಸಿದ್ದಾರೆ.
ಇದನ್ನೂ ಓದಿ:Movies: ಈ ವಾರ ರಿಲೀಸ್ ಆಗಲಿದೆ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಬಹುದಾದ ಸಿನಿಮಾಗಳು
ಸಂಸತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಮತ್ತೆ ಮೈತ್ರಿಯಾಗುವ ಮೂಲಕ ಚುನಾವಣಾ ಅಖಾಡಕ್ಕೆ ಇಳಿಯಲಿವೆ ಎಂಬ ಊಹಾಪೋಹದ ನಡುವೆ ಈ ಘೋಷಣೆ ಹೊರಬೀಳುವ ಮೂಲಕ ಗಾಳಿಸುದ್ದಿಗೆ ತಡೆ ಬಿದ್ದಂತಾಗಿದೆ.
ಏಳು ಹಂತದ ಲೋಕಸಭಾ ಚುನಾವಣೆಯ ಕೊನೆಯ ಹಂತದಲ್ಲಿ ಜೂನ್ 1ರಂದು ಪಂಜಾಬ್ ನಲ್ಲಿ ಮತದಾನ ನಡೆಯಲಿದೆ. ಪಂಜಾಬ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಜಾಖರ್ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯದ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಾಖರ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರತಿಯೊಬ್ಬರಿಗೂ ಅವರ ಬಗ್ಗೆ ತಿಳಿದಿದೆ ಎಂದು ಜಾಖರ್ ಹೇಳಿದರು.