Advertisement

“ದೇಶದ್ರೋಹಿಗಳ ವಿರುದ್ಧ ಬಿಜೆಪಿ ಹೋರಾಟ’

11:27 PM Sep 14, 2020 | mahesh |

ಮಂಗಳೂರು: ದೇಶ ದ್ರೋಹದ ಕೆಲಸ ಮಾಡುವವರ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತದೆಯೇ ಹೊರತು ದಲಿತರಿಗೆ ವಿರೋಧವಾಗುವ ಅಥವಾ ಸಂವಿಧಾನವನ್ನು ವಿರೋಧಿಸುವಂತಹ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಅವರು ಹೇಳಿದರು.

Advertisement

ಬಿಜೆಪಿ ದ.ಕ. ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ದ.ಕ. ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾದ ಪದಗ್ರಹಣ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು. ದಲಿತರನ್ನು ಬಿಜೆಪಿಯ ವಿರುದ್ಧ ನಿರಂತರವಾಗಿ ಎತ್ತಿಕಟ್ಟುವ ಮೂಲಕ ಬಿಜೆಪಿಯಿಂದ ದೂರ ಇರಿಸುವ ಕುತಂತ್ರವನ್ನು ಕಾಂಗ್ರೆಸ್‌ ನಿರಂತರವಾಗಿ ಮಾಡುತ್ತಿದೆ. ಇದರ ವಿರುದ್ಧ ಸಮಾಜ ಪ್ರಸ್ತುತ ಜಾಗೃತವಾಗಿದೆ. ದಲಿತರ ಉದ್ಧಾರ ಹಾಗೂ ಸಂವಿಧಾನದ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ಮನವರಿಕೆ ಪ್ರಸ್ತುತ ಸಮಾಜದಲ್ಲಿ ಆಗಿದೆ ಎಂದರು.

ಅಂಬೇಡ್ಕರ್‌ ಅವರನ್ನು ಪೂಜನೀಯ ಭಾವದಿಂದ ನಾವು ಗೌರವಿಸಿದ್ದೇವೆ. ಆರ್ಟಿಕಲ್‌ 370ಕ್ಕೆ ಅಂದು ಅಂಬೇಡ್ಕರ್‌ ಅವರೇ ವಿರೋಧಿಸಿದ್ದರು. ಆದರೆ ಅದನ್ನು ತೆಗೆದುಹಾಕಲು ಕಾಂಗ್ರೆಸ್‌ ಬಳಿಕ ಮನಸ್ಸು ಮಾಡಿಲ್ಲ. ಬದಲಾಗಿ ಬಿಜೆಪಿಯು ಅಂಬೇಡ್ಕರ್‌ ಅವರ ಆಶಯದಂತೆ 370ನೇ ವಿಧಿ ರದ್ದುಪಡಿಸುವ ಮೂಲಕ ಸಂವಿಧಾನ ರಕ್ಷಣೆಯ ಕಾರ್ಯ ನಡೆಸಿದೆ. ಹಾಗಾದರೆ ಬಿಜೆಪಿ ಅಂಬೇಡ್ಕರ್‌ ವಿರೋಧಿ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದರು.

ದಲಿತರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಅವರನ್ನು ಎತ್ತಿಕಟ್ಟುವ ಮೂಲಕ ಕಾಂಗ್ರೆಸ್‌ ಓಟ್‌ಬ್ಯಾಂಕ್‌ ರಾಜಕಾರಣಕ್ಕೆ ಮುಂದಾಗಿದೆ. ಕಾಂಗ್ರೆಸ್‌- ಜೆಡಿಎಸ್‌ನವರು ಕುಟುಂಬ ರಾಜಕಾರಣದಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಯಾವತ್ತಿಗೂ ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಅವರು ಬಿಜೆಪಿಯಲ್ಲಿಯೂ ಡ್ರಗ್‌ ತೆಗೆದುಕೊಳ್ಳುವ ವರು ಇದ್ದಾರೆ ಎನ್ನುತ್ತಾರೆ. ಆದರೆ ಯಾರ ಹೆಸರನ್ನು ಹೇಳುತ್ತಿಲ್ಲ. ಏಕೆಂದರೆ ಬಿಜೆಪಿಯಲ್ಲಿ ಅಂತವರಿಲ್ಲ. ಬದಲಿಗೆ ಕಾಂಗ್ರೆಸ್‌ನ ವರಿಷ್ಠ ನಾಯಕರೇ ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದರ ಬಗ್ಗೆ ಈ ಹಿಂದೆ ಮಾಧ್ಯಮದಲ್ಲಿ ಬಂದಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಡಿ. ವಿನಯನೇತ್ರ ದಡ್ಡಲಕಾಡು ಹಾಗೂ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.

Advertisement

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಪಾಲಿಕೆ ಸದಸ್ಯರಾದ ಸುಧೀರ್‌ ಶೆಟ್ಟಿ ಕಣ್ಣೂರು, ಮನೋಜ್‌ ಕುಮಾರ್‌, ಭರತ್‌ ಕುಮಾರ್‌, ಬಿಜೆಪಿ ಪ್ರಮುಖರಾದ ಪ್ರಭಾ ಮಾಲಿನಿ, ದಿನಕರ ಬಾಬು, ಮಂಗಳಾ ಆಚಾರ್ಯ, ದಿನೇಶ್‌ ಅಮೂrರು, ಅಣ್ಣಿ ಎಲ್ತಿಮಾರ್‌ ಉಪಸ್ಥಿತರಿದ್ದರು. ಭೋಜರಾಜ್‌ ಕೋಟ್ಯಾನ್‌ ಅವರು ಸ್ವಾಗತಿಸಿ, ರಘುವೀರ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next