Advertisement

ಸೋಲಿಗೆ ಕಾರಣಗಳನ್ನು ಕಂಡು ಹಿಡಿಯಲು ವಿವರವಾದ ವಿಶ್ಲೇಷಣೆ: ಬೊಮ್ಮಾಯಿ

04:24 PM May 14, 2023 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳನ್ನು ಕಂಡುಹಿಡಿಯಲು ಒಟ್ಟಾರೆ ಚುನಾವಣ ಫಲಿತಾಂಶಗಳು ಮತ್ತು ಕ್ಷೇತ್ರವಾರು ಫಲಿತಾಂಶಗಳ ವಿವರವಾದ ವಿಶ್ಲೇಷಣೆಯನ್ನು ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಕೆಲ ಮುಖಂಡರು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಭಾನುವಾರ ಇಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಮತಗಳಿಕೆ ಒಂದೇ ಆಗಿದ್ದರೂ, ಸ್ಥಾನಗಳು ಕಡಿಮೆಯಾಗಿವೆ. ಕ್ಷೇತ್ರವಾರು ಮತ ಹಂಚಿಕೆಯ ವಿಶ್ಲೇಷಣೆಯು ಇದಕ್ಕೆ ಕಾರಣಗಳನ್ನು ನೀಡಬಹುದು ಎಂದರು.

‘ಇದು ಪ್ರಧಾನಿ ನರೇಂದ್ರ ಮೋದಿಯವರ ಸೋಲು’ ಎಂಬ ಕಾಂಗ್ರೆಸ್ ಹೇಳಿಕೆಯನ್ನು ತಳ್ಳಿಹಾಕಿದ ಬೊಮ್ಮಾಯಿ, ಪಕ್ಷದ ಕಾರ್ಯಕ್ಷಮತೆಗೆ ಹಲವಾರು ಅಂಶಗಳು ಕೊಡುಗೆ ನೀಡಿವೆ ಮತ್ತು ಅವೆಲ್ಲವನ್ನೂ ವಿಶ್ಲೇಷಿಸಲಾಗುವುದು. ಈ ನಿಟ್ಟಿನಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲ ವಿಧಾನಸಭಾ ಸದಸ್ಯರು ಹಾಗೂ ಅಭ್ಯರ್ಥಿಗಳ ಸಭೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದರು.

“ಫಲಿತಾಂಶಗಳ ಬಗ್ಗೆ ಮತ್ತು ವಿವಿಧ ಪ್ರದೇಶಗಳಿಂದ ಮಾಹಿತಿಯನ್ನು ಪಡೆಯುವ ಬಗ್ಗೆ ನಾವು ಅನೌಪಚಾರಿಕ ಚರ್ಚೆಗಳನ್ನು ನಡೆಸಿದ್ದೇವೆ. ಒಟ್ಟಾರೆ ಫಲಿತಾಂಶದ ವಿಸ್ತೃತ ವಿಶ್ಲೇಷಣೆ ಮತ್ತು ಕ್ಷೇತ್ರವಾರು ವಿಶ್ಲೇಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

“ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸುವ ಮತ್ತು ಬಲಪಡಿಸುವ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಲು ಎಲ್ಲಾ ಚುನಾಯಿತ ಸದಸ್ಯರ ಸಭೆಯನ್ನು ಕರೆಯಲು ನಿರ್ಧರಿಸಲಾಗಿದೆ, ನಂತರ ಎಲ್ಲಾ ಅಭ್ಯರ್ಥಿಗಳ ಸಭೆ ನಡೆಸುತ್ತೇವೆ” ಎಂದು ಅವರು ಹೇಳಿದರು.

Advertisement

ಬಿಜೆಪಿ ಕೇವಲ ಚುನಾವಣೆಗಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ ಬೊಮ್ಮಾಯಿ, ಪಕ್ಷವನ್ನು ಸಂಘಟಿಸುವುದು ನಿರಂತರ ಪ್ರಕ್ರಿಯೆ ಎಂದರು.

2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ 40 ಸ್ಥಾನಗಳನ್ನು ಪಡೆದ ಉದಾಹರಣೆಯನ್ನು ಉಲ್ಲೇಖಿಸಿ, 2014 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು 19 ಸ್ಥಾನಗಳನ್ನು ಗಳಿಸಿತು. ಇಂದು ನಾವು ಇನ್ನೂ ಉತ್ತಮ ಸ್ಥಿತಿಯಲ್ಲಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ 2024 ರ ಲೋಕಸಭೆ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತೇವೆ ಎಂದರು.

224 ಸದಸ್ಯ ಬಲದ ಅಸೆಂಬ್ಲಿಗೆ ಮೇ 10 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದರೆ, ಆಡಳಿತಾರೂಢ ಬಿಜೆಪಿ 66 ಮತ್ತು ಜೆಡಿಎಸ್ 19 ಸ್ಥಾನಗಳನ್ನು ಗಳಿಸಿದೆ. ಕರ್ನಾಟಕ ಲೋಕಸಭೆಯಲ್ಲಿ 28 ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ ಬಿಜೆಪಿ ಪ್ರಸ್ತುತ 25 ಸ್ಥಾನಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next