Advertisement

ಅನರ್ಹರಿಗೆ ಅಥವಾ ಅವರು ಸೂಚಿಸಿದವರಿಗೆ ಬಿಜೆಪಿ ಟಿಕೆಟ್‌

11:37 PM Sep 23, 2019 | Lakshmi GovindaRaju |

ಬೆಂಗಳೂರು: 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮೊದಲಿಗೆ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು, ಪರಾಜಿತ ಅಭ್ಯರ್ಥಿಗಳ ಮನವೊಲಿಸಲು ಆದ್ಯತೆ ನೀಡಿರುವ ಬಿಜೆಪಿ ನಂತರ ಅವಕಾಶ ಸಿಕ್ಕರೆ ಅನರ್ಹ ಶಾಸಕರು ಇಲ್ಲವೇ ಅವರು ಸೂಚಿಸುವವರಿಗೆ ಟಿಕೆಟ್‌ ನೀಡಿ ಚುನಾವಣೆ ಎದುರಿಸಲು ನಿರ್ಧರಿಸಿದೆ.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಸಿಎಂ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೇರಿ ಬೆಂಗಳೂರಿನ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು. ಹಲವು ಆಕಾಂಕ್ಷಿಗಳು ಸ್ಪರ್ಧಿಸಲು ಉತ್ಸಾಹ ತೋರುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಬಿಜೆಪಿ ಸರ್ಕಾರ ರಚನೆಗಾಗಿ “ತ್ಯಾಗ’ ಮಾಡಿದವರ ಹಿತ ಕಾಪಾಡುವುದು ಮುಖ್ಯ ಹಾಗಾಗಿ ಮೊದಲಿಗೆ ಪಕ್ಷದಲ್ಲಿನ ಟಿಕೆಟ್‌ ಆಕಾಂಕ್ಷಿಗಳೊಂದಿಗೆ ಚರ್ಚಿಸಿ ಮನವೊಲಿಸಬೇಕು.

ಸದ್ಯದ ಪರಿಸ್ಥಿತಿ, ಅನರ್ಹ ಶಾಸಕರಿಗೆ ನೀಡಿರುವ ವಾಗ್ಧಾನ ಪಾಲನೆ, ಸುಸ್ಥಿರ ಸರ್ಕಾರಕ್ಕೆ ಪೂರಕವಾಗಿರುವ ಅಂಶಗಳ ಬಗ್ಗೆ ತಿಳಿ ಹೇಳಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ. ಅನರ್ಹತೆಗೊಂಡ ಶಾಸಕರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಬುಧವಾರ ವಿಚಾರಣೆ ನಡೆಸಲಿದೆ. ಕೋರ್ಟ್‌ನ ಆದೇಶ ಆಧರಿಸಿ ಮುಂದಿನ ಕಾರ್ಯತಂತ್ರ ಹೆಣೆಯಲು ನಿರ್ಧರಿಸಲಾಯಿತು. ಬುಧವಾರ ಇಲ್ಲವೇ ಗುರುವಾರ ಮತ್ತೂಮ್ಮೆ ಸಭೆ ನಡೆಸಲು ಚಿಂತಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಸಚಿವರಿಗೆ ಚುನಾವಣಾ ಉಸ್ತುವಾರಿ: ಬಿಜೆಪಿಯು ಪ್ರತಿ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಒಬ್ಬೊಬ್ಬ ಸಚಿವರಿಗೆ ವಹಿಸುವ ಜತೆಗೆ ಸಂಘಟನೆಯಲ್ಲಿ ನುರಿತ, ಅನುಭವಿಯೊಬ್ಬರನ್ನು ನಿಯೋಜಿಸುವ ಸಾಧ್ಯತೆ ಇದೆ. ಹಾಗೆಯೇ ಉಪಚುನಾವಣೆ ನಡೆದಿರುವ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಅಕ್ಕಪಕ್ಕದ ಬಿಜೆಪಿ ಶಾಸಕರನ್ನು ಒಟ್ಟುಗೂಡಿಸಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಶರತ್‌ ಬಚ್ಚೇಗೌಡಗೆ ಸೂಕ್ತ ಸ್ಥಾನಮಾನ?: ಅನರ್ಹತೆಗೆ ಸಂಬಂಧಪಟ್ಟ ಪ್ರಕರಣದಲ್ಲಿ ಯಾವುದೇ ತೀರ್ಪು ಬಂದರೂ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‌ ಪುತ್ರ ನಿತಿನ್‌ ಪುರುಷೋತ್ತಮ್‌ ಅವರೇ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರಿಂದಾಗಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಶರತ್‌ ಬಚ್ಚೇಗೌಡ ಅಸಮಾಧಾನಗೊಂಡಿದ್ದಾರೆ.

Advertisement

ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಶರತ್‌ ಬಚ್ಚೇಗೌಡರಿಗೆ ಪ್ರಭಾವಿ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಇಲ್ಲವೇ ಪರ್ಯಾಯ ಸ್ಥಾನಮಾನ ಕೊಡುವ ಬಗ್ಗೆಯೂ ಪ್ರಸ್ತಾಪವಾಯಿತು. ಕೊನೆಗೆ ಮುಖ್ಯಮಂತ್ರಿಗಳು ಸಚಿವ ಆರ್‌.ಅಶೋಕ್‌ ಅವರೊಂದಿಗೆ ಪ್ರತ್ಯೇಕವಾಗಿ ಈ ವಿಚಾರ ಚರ್ಚಿಸುವುದಾಗಿ ತಿಳಿಸಿದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next