ಬೇತಮಂಗಲ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಆಶಯದಂತೆ ಮತದಾರರಿಗೆ ಚುನಾವಣೆ ವೇಳೆಯಲ್ಲಿ ಹಣವನ್ನು ನೀಡದೆ ಗೆಲ್ಲಲಿ ಎಂದು ಕೆಲವು ದಲಿತ ಮುಖಂಡರು ಇತ್ತೀಚಿಗೆ ಶಾಸಕಿ ಎಂ. ರೂಪಕಲಾ ಮತ್ತು ಮೋಹನ್ ಕೃಷ್ಣ ಅವರಿಗೆ ಸವಾಲು ಹಾಕಿದ್ದು, ಈ ಸವಾಲಿಗೆ ತಾವು ಸಿದ್ಧರಿದ್ದು ಶಾಸಕರು ಹಾಗೂ ಇತರೆ ಆಕಾಂಕ್ಷಿಗಳು ಬಹಿರಂಗ ಚರ್ಚೆ ಬರಲಿ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ವಿ.ಮೋಹನ್ ಕೃಷ್ಣ ಸವಾಲು ಹಾಕಿದರು.
ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಕೆಲವು ದಲಿತ ನಾಯಕರು ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಅಪಪ್ರಚಾರ ನಡೆಸುವಂತೆ ಮತದಾರರಿಗೆ ಅಮೀಷಗಳನ್ನು ಒಡ್ಡಲಾಗುತ್ತಿದೆ ಎಂಬ ಆರೋಪವನ್ನು ಮಾಡಿದ್ದು ಅಂಬೇಡ್ಕರ್ ರವರ ಆಶಯದಂತೆ ಪ್ರಚಾರ ನಡೆಸಲು ನಾನು ರೆಡಿ ಇದ್ದೇನೆಂದು ಮೋಹನ್‌ಕೃಷ್ಣ ಸ್ಪಷ್ಟಪಡಿಸಿದರು. ಪಟ್ಟಣದ ಬಳಿಯ ಮಹದೇವಪುರ ಗ್ರಾಮದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನ್‌ಕೃಷ್ಣ, ನಾನು ಒಬ್ಬ ಬಡ ರೈತನ ಮಗನಾಗಿ ಹುಟ್ಟಿ ಆರ್ಥಿಕವಾಗಿ ಸದೃಢನಾಗಿದ್ದು ನನ್ನಂತೆ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿನ ಪ್ರತಿಯೊಬ್ಬ ತಾಯಂದಿರುವ ಶಕ್ತಿವಂತರಾಗಬೇಕು ಎಂಬ ಉದ್ದೇಶದಿಂದ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಹಸ್ತವನ್ನು ಚಾಚುತ್ತಿದ್ದೇನೆ ಎಂದರು.
ನನಗೆ ಯಾವುದೆ ಅಧಿಕಾರವಿಲ್ಲ ಆದರು ನನ್ನ ದುಡಿಮೆಯಲ್ಲಿ ಬಂದಂತಹ ಹಣವನ್ನು ಬಡವರಿಗೆ ನೀಡುತ್ತಿದ್ದೇನೆ. ಆದರೆ, ಕಳೆದ 27 ವರ್ಷಗಳಿಂದ ರಾಜ್ಯಭಾರ ನಡೆಸಿದ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಇದೀಗ ಶಾಸಕಿಯಾಗಿರುವ ಪುತ್ರಿ ರೂಪಕಲಾ ಡಿಸಿಸಿ ಬ್ಯಾಂಕ್ ಮೂಲಕ ಬಡವರನ್ನು ಸಾಲದ ಕೂಪದಲ್ಲಿ ತಳ್ಳಿದ್ದಾರೆ. ಶಾಸಕಿಯಾಗಿ ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಸದೆ ಕೇವಲ ಹಣ ಹಂಚಿಕೆ ಮಾಡುವುದನ್ನು ಅಭ್ಯಾಸಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಮತದಾರರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಆರೋಪಿಸಿದರು.
ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಜಯಪ್ರಕಾಶ್ ನಾಯ್ಡು, ಗ್ರಾಪಂ ಮಾಜಿ ಅಧ್ಯಕ್ಷ ನವೀಣ್ ರಾಮ್, ಗ್ರಾಪಂ ಸದಸ್ಯ ಕಣ್ಣೂರು ಚಲಪತಿ, ಮುಖಂಡ ಕೃಷ್ಣಪ್ಪ, ಗಂಗಿರೆಡ್ಡಿ ಇತರರಿದ್ದರು.
ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಬರಲು ರೆಡಿ : ದಲಿತ ಮುಖಂಡರ ಮಾತುಗಳನ್ನು ನಾನು ಒಪ್ಪುತ್ತೇನೆ. ಆದರೆ, ಶಾಸಕಿ ರೂಪಕಲಾ ರವರು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ವೇದಿಕೆಗಳಲ್ಲಿ ಚರ್ಚೆ ನಡೆಸಲು ಸಿದ್ಧರಾಗಿದ್ದಾರಾ? ನಾನು ಮಾತ್ರ ರೆಡಿಯಾಗಿದ್ದೇನೆ ಎಲ್ಲಿ ಯಾವ ವೇದಿಕೆಗೆ ಕರೆದರು ಬರಲು ಸಿದ್ಧನಿದ್ದೇನೆ ಎಂದು ಬಹಿರಂಗವಾಗಿ ಸವಾಲ್ ಹಾಕಿದರು. ಚುನಾವಣೆಗಾಗಿ ಹಣದ ದಬ್ಟಾಳಿಕೆ ಮಾಡಿದವರು ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಈಗಲೂ ಕೆಜಿಎಫ್ ಜನತೆಯನ್ನು ಸಾಲಕ್ಕೆ ಸಿಲುಕಿಸಿದ್ದಾರೆ. ದಲಿತ ಮುಖಂಡರು ಹೇಳಿದಂತೆ ಅಂಬೇಡ್ಕರ್ ಆಶಯದಂತೆ ಚುನಾವಣೆ ಎದುರಿಸಲು ಮೊದಲು ಶಾಸಕರು ಸವಾಲನ್ನು ಸ್ವೀಕರಿಸಲಿ ಎಂದು ಹೇಳಿದರು.