Advertisement

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

02:22 AM Dec 22, 2024 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣಗಳ ನಡುವೆ ನಡೆಯುತ್ತಿರುವ ಮೇಲಾಟದಿಂದ ಪಕ್ಷ ಬಡವಾಗುತ್ತಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತೆ ಹಳಿಗೆ ತರುವ ಉದ್ದೇಶದಿಂದ ಬಿಜೆಪಿಯ ತಟಸ್ಥ ಬಣ ಈಗ ಸದ್ದಿಲ್ಲದೆ ಸಕ್ರಿಯವಾಗಿದ್ದು, ವ್ಯವಸ್ಥೆಯನ್ನು ಸರಿದಾರಿಗೆ ತನ್ನಿ ಎಂಬ ಆಗ್ರಹವನ್ನು ವರಿಷ್ಠರಿಗೆ ತಲುಪಿಸಲು ಮುಂದಾಗಿದೆ.

Advertisement

ಈ ಸಂಬಂಧ ಬೆಂಗಳೂರಿನಲ್ಲಿ ಮಹತ್ವದ ಸಭೆಯೊಂದನ್ನು ನಡೆಸುವುದಕ್ಕೆ ಸಿದ್ಧತೆ ಆಗುತ್ತಿದೆ. ಈ ಮಧ್ಯೆ ಡಿ. 29ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬೆಂಗಳೂರಿಗೆ ಆಗಮಿಸುತ್ತಿರುವುದು ಕುತೂಹಲ ಸೃಷ್ಟಿಸಿದೆ. ಯತ್ನಾಳ್‌ ಹಾಗೂ ವಿಜಯೇಂದ್ರ ಬಣಗಳ ನಡುವಣ ಕಚ್ಚಾಟ ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಈ ಬಣದ ವಾದವಾಗಿದೆ.

ಮಂಡಲದಿಂದ ರಾಜ್ಯ ಮಟ್ಟದ ವರೆಗೆ ವಿವಿಧ ಜವಾಬ್ದಾರಿ ಹೊಂದಿರುವ ಪದಾಧಿಕಾರಿಗಳು, ಶಾಸಕರು, ಸಂಸದರು, ಮಾಜಿ ಸಚಿವರು ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸ್ಪೀಕರ್‌ಗಳು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಒಂದು ವರ್ಷದಿಂದ ಪಕ್ಷದ ರಾಜ್ಯ ಘಟಕದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಬಗ್ಗೆ ವರಿಷ್ಠರನ್ನು ಭೇಟಿ ಮಾಡಿ ವಿವರಣೆ ನೀಡುವುದಕ್ಕೆ ಈ ಬಣ ತೀರ್ಮಾನಿಸಿದೆ.

ತಮ್ಮನ್ನು ಒಂದು ಬಣವಾಗಿ ಗುರುತಿಸಿಕೊಳ್ಳುವುದಕ್ಕೆ ಅಥವಾ ಕರೆದುಕೊಳ್ಳುವುದಕ್ಕೆ ಈ ಸಭೆ ನಡೆಸುವ ನಾಯಕರು ಸಿದ್ಧರಿಲ್ಲ. ಎರಡು ತಿಂಗಳು ಹಿಂದೆಯೇ ಸಭೆ ಸೇರುವುದಕ್ಕೆ ಇವರೆಲ್ಲರೂ ನಿಶ್ಚಯಿಸಿದ್ದರು. ಆದರೆ ಮೂರನೇ ಬಣ ಸೃಷ್ಟಿಯಾಗಿದೆ ಎಂಬ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಾಗಿದ್ದರು. ಈಗ ಎರಡು ಬಣಗಳು ಪ್ರತ್ಯೇಕ ಸಮಾವೇಶ ನಡೆಸುವ ಹಂತಕ್ಕೆ ತಲುಪಿರುವುದರಿಂದ ಸುಮ್ಮನೆ ಕುಳಿತರೆ ಪಕ್ಷದ ವಾತಾವರಣ ಹಾಗೂ ಶಿಸ್ತು ಕೆಡುತ್ತದೆ ಎಂಬ ಕಾರಣಕ್ಕೆ ಸಭೆ ನಡೆಸಿ ಚರ್ಚಿಸಲು ಮುಂದಾಗಿದ್ದಾರೆ.

ಬಿಜೆಪಿ ಎಂದರೆ ಕೇವಲ ಯತ್ನಾಳ್‌ ಹಾಗೂ ವಿಜಯೇಂದ್ರ ಬಣದ ಕಚ್ಚಾಟ, ಮೇಲಾಟವಷ್ಟೇ ಅಲ್ಲ. ಸಂಘಟನಾತ್ಮಕವಾಗಿ ಇನ್ನೂ ಜವಾಬ್ದಾರಿ ಹಾಗೂ ಕೆಲಸಗಳಿವೆ. ಈ ಬಗ್ಗೆ ವರಿಷ್ಠರು ಗಮನ ನೀಡದೆ ಇದ್ದರೆ ಪಕ್ಷದ ಭವಿಷ್ಯ ಕಷ್ಟ ಎಂಬ ಸಂದೇಶವನ್ನು ದಿಲ್ಲಿಗೆ ತಲುಪಿಸುವುದು ಈ ಸಭೆಯ ಉದ್ದೇಶವಾಗಿದೆ. ಅವಕಾಶ ಸಿಕ್ಕರೆ ಪ್ರಧಾನಿ ಮೋದಿಯವರ ಭೇಟಿಗೂ ಸಮಯ ಕೇಳಬೇಕೆಂದು ನಿರ್ಧರಿಸಲಾಗಿದೆ.

Advertisement

ರಾಜ್ಯಕ್ಕೆ ನಡ್ಡಾ?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಡಿ. 29ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆರೋಗ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬರುತ್ತಿದ್ದಾರೆಂಬ ಮಾಹಿತಿ ಇದೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ಪ್ರಮುಖ ನಾಯಕರ ಜತೆಗೆ ಚರ್ಚೆ ನಡೆಸಲಿದ್ದಾರೆ ಎಂಬ ಸುದ್ದಿ ಬಿಜೆಪಿ ವಲ
ಯದಲ್ಲಿ ಹರಿದಾಡುತ್ತಿದೆ. ಹೀಗಾಗಿ ಮುಂದಿನ ವಾರ ಬಿಜೆಪಿಯಲ್ಲಿ ತೀವ್ರ ಚಟುವಟಿಕೆ ಸೃಷ್ಟಿಸಲಿದೆ.

ಏನಿದು ಬೆಳವಣಿಗೆ?
ಬಿ.ವೈ. ವಿಜಯೇಂದ್ರ- ಯತ್ನಾಳ್‌ ಬಣ ಗಳ ನಡುವೆ ಇನ್ನೊಂದು ಬಣ ಸಕ್ರಿಯ
ಪಕ್ಷವನ್ನು ಮತ್ತೆ ಹಳಿಗೆ ತರಲು ಯತ್ನ; ಬೆಂಗಳೂರಲ್ಲಿ ಸಭೆಗೆ ಸಿದ್ಧತೆ
ಒಂದು ವರ್ಷದ ವಿದ್ಯಮಾನ ವರಿಷ್ಠರಿಗೆ ಮನವರಿಕೆ ಮಾಡಲು ತೀರ್ಮಾನ
ರಾಜ್ಯ ಬಿಜೆಪಿಯತ್ತ ಗಮನ ನೀಡದೆ ಇದ್ದರೆ ಭವಿಷ್ಯ ಕಷ್ಟ ಎಂಬ ಸಂದೇಶ

Advertisement

Udayavani is now on Telegram. Click here to join our channel and stay updated with the latest news.

Next