Advertisement

Karnataka Election 2023: ಬಿಜೆಪಿ- ಮೂಲ ನಿವಾಸಿಗಳ ಕ್ಷೇತ್ರಗಳಲ್ಲೇ ಸಮಸ್ಯೆ

09:58 AM Apr 14, 2023 | Team Udayavani |

ಬೆಂಗಳೂರು: “ಆಪರೇಷನ್‌ ಕಮಲ’ದ ಮೂಲಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೊರೆದು ಬಂದಿದ್ದ ಎಲ್ಲರಿಗೂ ಮತ್ತೆ ಬಿಜೆಪಿ ಟಿಕೆಟ್‌ ಘೋಷಿಸಿದ್ದು, ಒಂದು ಕ್ಷೇತ್ರ ಹೊರತುಪಡಿಸಿದರೆ ಉಳಿದ ಕಡೆ ಮೂಲ ಬಿಜೆಪಿಗರಿಂದ ಬಂಡಾಯದ ಬಿಸಿ ಇಲ್ಲ. ಆದರೆ ಈಗ ಬಿಜೆಪಿ ಮೂಲ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಲ್ಲೇ ಮೂಲ ಬಿಜೆಪಿಗರಿಂದಲೇ ಬಂಡಾಯ, ಅಸಮಾಧಾನ, ಆಕ್ರೋಶ ವ್ಯಕ್ತವಾಗುತ್ತಿರುವುದು ಹೊಸ ಬೆಳವಣಿಗೆ. ಈಗಿನ ಪರಿಸ್ಥಿತಿ ನೋಡಿದರೆ ಬಿಜೆಪಿಯ ಮನೆಯಲ್ಲೇ ಬೆಂಕಿ ಬಿದ್ದಂತೆ ಅಗಿದೆ.

Advertisement

ಅಥಣಿಯಲ್ಲಿ ಶಾಸಕ ಮಹೇಶ್‌ ಕುಮಟಹಳ್ಳಿಗೆ ಟಿಕೆಟ್‌ ನೀಡಿರುವುದರಿಂದ ಮೂಲ ಬಿಜೆಪಿಯ ಮಾಜಿ ಸಚಿವ ಲಕ್ಷ್ಮಣ ಸವದಿ ಬಂಡಾಯ ಸಾರಿದ್ದು, ಸ್ಪರ್ಧೆಗೆ ಮುಂದಾಗಿದ್ದಾರೆ. ಇದನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಅಸಮಾಧಾನ ಇಲ್ಲ.

ಡಾ| ಸುಧಾಕರ್‌ ಪ್ರತಿನಿಧಿಸುವ ಚಿಕ್ಕಬಳ್ಳಾಪುರ, ಎಸ್‌.ಟಿ. ಸೋಮಶೇಖರ್‌ ಅವರ ಯಶವಂತಪುರ, ಬೈರತಿ ಬಸವರಾಜ್‌ ಅವರ ಕೆ.ಆರ್‌. ಪುರ, ಗೋಪಾಲಯ್ಯ ಅವರ ಮಹಾಲಕ್ಷ್ಮೀ ಲೇ ಔಟ್‌, ಮುನಿರತ್ನ ಅವರ ರಾಜರಾಜೇಶ್ವರಿ ನಗರ, ರಮೇಶ್‌ ಜಾರಕಿಹೊಳಿ ಅವರ ಗೋಕಾಕ, ಶ್ರೀಮಂತ ಪಾಟೀಲ್‌ ಅವರ ಕಾಗವಾಡ, ನಾರಾಯಣಗೌಡ ಅವರ ಕೆ.ಆರ್‌. ಪೇಟೆ, ಎಂ.ಟಿ.ಬಿ. ನಾಗರಾಜ್‌ ಅವರ ಹೊಸಕೋಟೆ ಕ್ಷೇತ್ರಗಳಲ್ಲಿ ಮೂಲ ಬಿಜೆಪಿಯವರ ಬಂಡಾಯ ಅಥವಾ ಇತರ ಆಕಾಂಕ್ಷಿಗಳ ಅಸಮಾಧಾನವಿಲ್ಲ.

ಮಸ್ಕಿಯಲ್ಲಿ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಪ್ರತಾಪಗೌಡ ಪಾಟೀಲರಿಗೂ ಮತ್ತೆ ಬಿಜೆಪಿ ಟಿಕೆಟ್‌ ನೀಡಿದ್ದು, ಅಲ್ಲೂ ಮೂಲ ಬಿಜೆಪಿಯವರಿಂದ ಬಂಡಾಯ ಇಲ್ಲ.
ಯಲ್ಲಾಪುರದಲ್ಲಿ ಶಿವರಾಮ ಹೆಬ್ಟಾರ್‌ ಬಿಜೆಪಿ ಸೇರಿ ಸಚಿವರಾದ ಅನಂತರ ನಿಗಮದ ಅಧ್ಯಕ್ಷರಾಗಿದ್ದ ಅಲ್ಲಿನ ಮಾಜಿ ಶಾಸಕ ವಿ.ಎಸ್‌. ಪಾಟೀಲ್‌ ಹಾಗೂ ಹಿರೇಕೆರೂರಿನಲ್ಲಿ ಬಿ.ಸಿ. ಪಾಟೀಲ್‌ ಬಿಜೆಪಿ ಸೇರಿ ಸಚಿವರಾದ ಅನಂತರ ನಿಗಮದ ಅಧ್ಯಕ್ಷರಾಗಿದ್ದ ಯು.ಬಿ. ಬಣಕಾರ್‌ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ ಆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಅಧಿಕೃತವಾಗಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡುತ್ತಿರುವುದರಿಂದ ಬಂಡಾಯದ ತಲೆಬಿಸಿ ಇಲ್ಲ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಆಪರೇಷನ್‌ ಕಮಲ ಕಾರ್ಯಾಚರಣೆಯಡಿ ಬಿಜೆಪಿ ಸೇರಿದ್ದ ಪಕ್ಷೇತರ ಶಾಸಕ ಆರ್‌. ಶಂಕರ್‌ ಅವರಿಗೆ ರಾಣೆಬೆನ್ನೂರಿನಲ್ಲಿ ಟಿಕೆಟ್‌ ಸಿಗದ ಕಾರಣ ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ರೋಷನ್‌ಬೇಗ್‌ ಅವರ ಪುತ್ರ ರುಮಾನ್‌ ಬೇಗ್‌ಗೆ ಬಿಜೆಪಿ ಟಿಕೆಟ್‌ ನೀಡಲಾಗುವುದು ಎಂದು ಹೇಳಲಾಗಿತ್ತಾದರೂ ಚಂದ್ರ ಎಂಬವರಿಗೆ ಟಿಕೆಟ್‌ ನೀಡಲಾಗಿದೆ.

Advertisement

ಬಿಜೆಪಿ ಬಂಡಾಯಗಾರರ ಬಗ್ಗೆ ಕಾಂಗ್ರೆಸ್‌ ಎಚ್ಚರಿಕೆಯ ಹೆಜ್ಜೆ
ಬೆಂಗಳೂರು: ಬಿಜೆಪಿ ಟಿಕೆಟ್‌ ವಂಚಿತ ಶಾಸಕರು ಹಾಗೂ ಟಿಕೆಟ್‌ ಆಕಾಂಕ್ಷಿಗಳು ಕಾಂಗ್ರೆಸ್‌ ಬಾಗಿಲು ತಟ್ಟುತ್ತಿರುವುದರ ನಡುವೆಯೇ ಬಿಜೆಪಿ ಬಂಡಾಯಗಾರರ ಬಗ್ಗೆ ಎಚ್ಚರಿಕೆ ಹೆಜ್ಜೆಯನ್ನಿಡಲು ಕಾಂಗ್ರೆಸ್‌ ನಿರ್ಧರಿಸಿದೆ. ಸಮರ್ಥ ಅಭ್ಯರ್ಥಿಗಳೇ ಇಲ್ಲದ ಅಥವಾ ಅಭ್ಯರ್ಥಿಗಳು ದುರ್ಬಲವೆನಿಸಿದ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಿಜೆಪಿ ಅತೃಪ್ತರಿಗೆ ಎಲ್ಲ ಕಡೆ ಬಾಗಿಲು ತೆರೆಯುವ ಬದಲಿಗೆ ಅವರು ಅಲ್ಲೇ ಇದ್ದು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದರೆ ಅದರ ಲಾಭ ಪಕ್ಷಕ್ಕೆ ಆಗಬಹುದೆಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ತೊಡಗಿದೆ.

ಹೀಗಾಗಿ ಅಥಣಿಯಿಂದ ಲಕ್ಷ್ಮಣ ಸವದಿ ಹಾಗೂ ಕುಂದಗೋಳದಿಂದ ಎಸ್‌.ಐ. ಚಿಕ್ಕನಗೌಡ ಅವರನ್ನು ಮಾತ್ರ ಸದ್ಯಕ್ಕೆ ಕಾಂಗ್ರೆಸ್‌ ಸೇರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ. ಬಿಜೆಪಿಯ ಟಿಕೆಟ್‌ ವಂಚಿತರ ಪೈಕಿ ಹಲವರು ಕಾಂಗ್ರೆಸ್‌ ಸೇರಲು ಹಲವು ಮೂಲಗಳಿಂದ ಸಂಪರ್ಕ ನಡೆಸುತ್ತಿರುವುದು ಕಾಂಗ್ರೆಸ್‌ಗೆ ತಲೆನೋವಾಗಿದೆ. ಬಿಜೆಪಿ ಅತೃಪ್ತರಿಗೆ ಪಕ್ಷದ ಬಾಗಿಲು ತೆರೆದರೆ ಸ್ಥಳೀಯವಾಗಿ ಹಲವು ಸಮಸ್ಯೆಗಳಿಗೆ ನಾವೇ ಆಹ್ವಾನ ಕೊಟ್ಟಂತೆ ಆಗುತ್ತದೆ. ಜತೆಗೆ ಹಲವು ವರ್ಷಗಳ ಕಾಲ ನಮ್ಮ ವಿರುದ್ಧ ಹೋರಾಡಿದವರು ಹಾಗೂ ನಮ್ಮ ಪಕ್ಷಕ್ಕಾಗಿ ದುಡಿದವರು ಹೊಂದಿಕೊಂಡು ಹೋಗುವುದು ಕಷ್ಟ ಎಂಬುದು ಈಗಾಗಲೇ ಹಲವರ ಪಕ್ಷ ಸೇರ್ಪಡೆಯಿಂದ ಆಗಿರುವ ಅನುಭವ. ಹೀಗಾಗಿ ಈಗ ಯೋಚಿಸಿ ತೀರ್ಮಾನ ಕೈಗೊಳ್ಳುವ ಹಂತಕ್ಕೆ ಬಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುಜೇìವಾಲ ಅವರೊಂದಿಗೆ ಬಿಜೆಪಿ ಅಭ್ಯರ್ಥಿಗಳ 2 ಪಟ್ಟಿ ಬಿಡುಗಡೆ ಬಳಿಕ ನಡೆದಿರುವ ವಿದ್ಯಮಾನಗಳ ಬಗ್ಗೆ ಸುದೀರ್ಘ‌ ಸಮಾಲೋಚನೆ ನಡೆಸಿದರೆಂದು ತಿಳಿದುಬಂದಿದೆ. ಅಂದಾಜು 20 ರಿಂದ 25 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲ ಬಂಡಾಯ ಎದುರಿಸುತ್ತಿದೆ. ಇಂಥ ಕಡೆ ಕಾಂಗ್ರೆಸ್‌ ಗೆಲುವು-ಸೋಲು ಲೆಕ್ಕಾಚಾರ ಹಾಕಿಕೊಂಡು ಬರ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದೆ. ಎಲ್ಲರಿಗೂ ಆಹ್ವಾನ ನೀಡಿದರೆ ಬಿಜೆಪಿ ಸಮಸ್ಯೆ ಕಾಂಗ್ರೆಸ್‌ ಮನೆಗೆ ವರ್ಗಾವಣೆ ಆಗಲಿದೆ. ಆದ್ದರಿಂದ ಆ ರೀತಿಯ ಸಮಸ್ಯೆಯನ್ನು ಪಕ್ಷ ಬರಮಾಡಿಕೊಳ್ಳುವ ಬದಲಿಗೆ ಅವರು ಅಲ್ಲಿಯೇ ಇದ್ದು ಪಕ್ಷೇತರರಾಗಿ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ಅನುಕೂಲ ಎಂಬ ಹಿನ್ನೆಲೆಯಲ್ಲಿ ಕಾದು ನೋಡುವ ಇಲ್ಲವೇ ಯೋಚಿಸಿ ಆಯ್ಕೆ ಮಾಡುವುದು ಒಳಿತು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಲು ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next