ಲಕ್ನೋ : ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕಕ್ಕೆ ಅಖೀಲೇಶ್ ಯಾದವ್ ಮತ್ತು ಮಾಯಾವತಿ ಭೇಟಿ ನೀಡಲು ಮುಂದಾಗಿರುವುದನ್ನು “ರಾಜಕೀಯ ಪ್ರವಾಸೋದ್ಯಮ” ಎಂದು ಉತ್ತರ ಪ್ರದೇಶ ಬಿಜೆಪಿ ಘಟಕದ ರಾಕೇಶ್ ತ್ರಿಪಾಠಿ ಲೇವಡಿ ಮಾಡಿದ್ದಾರೆ.
ತ್ರಿಪಾಠಿ ಅವರು ಇದೇ ವೇಳೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕರ್ನಾಟಕಕ್ಕೆ ನೀಡುವ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಕರ್ನಾಟಕ ಭೇಟಿಯಿಂದಾಗಿ ರಾಜ್ಯದಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ಎಸ್‌ಪಿ ಮತ್ತು ಬಿಎಸ್‌ಪಿ ಎರಡೂ ಪಕ್ಷಗಳು ‘ಜಾತಿ ರಾಜಕಾರಣಕ್ಕೆ ಹೆಸರಾಗಿವೆ’ ಎಂದು ಟೀಕಿಸಿದ ತ್ರಿಪಾಠಿ, ಎಸ್‌ಪಿ ಮತ್ತು ಬಿಎಸ್‌ಪಿ ಮುಖ್ಯಸ್ಥರ ಕರ್ನಾಟಕ ಭೇಟಿಯು ಕೇವಲ ರಾಜಕೀಯ ಪ್ರವಾಸೋದ್ಯಮವಾಗಿದೆ ಎಂದು ಹೇಳಿದರು.
ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳು ಉತ್ತರ ಪ್ರದೇಶ ಮೂಲದವುಗಳಾಗಿವೆ. ಆದರೆ ಈ ರಾಜ್ಯದಲ್ಲಿ ಅವುಗಳ ಸ್ಥಿತಿ ದಯನೀಯವಿದೆ. ಇವುಗಳಿಗೆ ಕರ್ನಾಟಕದಲ್ಲಿ ಯಾವುದೇ ನೆಲೆ ಇಲ್ಲ; ಹಾಗಿದ್ದರೂ ಅವು ಮತದಾರರನ್ನು ಓಲೈಸಲು ಮುಂದಾಗುತ್ತಿವೆ ಎಂದು ತ್ರಿಪಾಠಿ ಹೇಳಿದರು.
ಸಿಎಂ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಗಳಾದ ಬಳಿಕ ಇಡಿಯ ದೇಶದ ಮೇಲೆ ಪ್ರಭಾವ ಬೀರಿರುವ ಬಿಜೆಪಿ ನಾಯಕ ಎನಿಸಿಕೊಂಡಿದ್ದಾರೆ ಎಂದು ತ್ರಿಪಾಠಿ ಹೇಳಿದರು.