ಹೈದರಾಬಾದ್: ಬಿಜೆಪಿ ಶಾಸಕ ಮತ್ತು ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ತೆಲಂಗಾಣ ಪೊಲೀಸರು ಜಂಗಾವ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದರು. ರಾಜಾ ಸಿಂಗ್ ಮಾತನಾಡುವ ವೀಡಿಯೊ ವೈರಲ್ ಆಗುತ್ತಿದ್ದಂತೆ ಸೋಮವಾರ ತಡರಾತ್ರಿ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಜಮಾಯಿಸಿದ್ದ ಪ್ರತಿಭಟನಾಕಾರರು, ತತ್ ಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಠಾಣೆಯ ಮುಂಭಾಗ ಹಾಗೂ ನಗರದ ಹಲವೆಡೆ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಓವೈಸಿ ಕಿಡಿ
ಬಿಜೆಪಿ ಶಾಸಕರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಹೈದರಾಬಾದ್‌ನಲ್ಲಿ ಶಾಂತಿ ನೆಲೆಸಿರುವುದು ಬಿಜೆಪಿಗೆ ಇಷ್ಟವಿಲ್ಲ. ಬಿಜೆಪಿ ಪ್ರವಾದಿ ಮಹಮ್ಮದ್ ಮತ್ತು ಮುಸ್ಲಿಮರನ್ನು ದ್ವೇಷಿಸುತ್ತದೆ. ಅವರು ಭಾರತದ ಸಾಮಾಜಿಕ ರಚನೆಯನ್ನು ನಾಶಮಾಡಲು ಬಯಸುತ್ತಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.
ರಾಜಕೀಯವಾಗಿ ನಮ್ಮೊಂದಿಗೆ ಜಗಳ ಆದರೆ ಅಡ್ಡಿ ಇಲ್ಲ. ಪ್ರಧಾನಿ ಮೋದಿ ಮತ್ತು ಬಿಜೆಪಿ ಈ ಹೇಳಿಕೆಗಳನ್ನು ಬೆಂಬಲಿಸದಿದ್ದರೆ ಅವರು ಪ್ರತಿಕ್ರಿಯಿಸಬೇಕು. ನಾನು ಘೋಷಣೆಗಳನ್ನು ಖಂಡಿಸುತ್ತೇನೆ ಮತ್ತು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ಜನರಿಗೆ ಹೇಳುತ್ತೇನೆ ಎಂದು ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.