ನವದೆಹಲಿ : ಮುಂಬರುವ ರಾಜ್ಯಸಭಾ ಉಪಚುನಾವಣೆಗೆ ತ್ರಿಪುರಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರ ಹೆಸರನ್ನು ನಾಮ ನಿರ್ದೇಶನ ಮಾಡಲಾಗಿದೆ.
ಮಾಣಿಕ್ ಸಹಾ ಅವರಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆಯು ಸೆಪ್ಟೆಂಬರ್ 22ರಂದು ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ.
ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ದೇಬ್ ಅವರ ಜನಪ್ರಿಯ ಕೆಲಸಗಳಿಂದ ಈಶಾನ್ಯ ರಾಜ್ಯದಲ್ಲಿ 2018ರ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದರು. ಈ ಜಯದಿಂದಾಗಿ 25 ವರ್ಷಗಳಿಂದ ಅಲ್ಲಿ ಆಳ್ವಿಕೆ ನಡೆಸುತ್ತಿದ್ದ ಎಡಪಕ್ಷಗಳ ಆಡಳಿತವನ್ನು ಅಂತ್ಯಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ನನ್ನನು ರಾಜ್ಯಸಭೆ ಚುನಾವಣೆಗೆ ನಾಮನಿರ್ದೇಶನ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು ಎಂದು ಬಿಪ್ಲವ್ ಕುಮಾರ್ ದೇವ್ ಟ್ವೀಟ್ ಮಾಡಿದ್ದಾರೆ.
ಈ ನಡುವೆ ತ್ರಿಪುರಾದ ಎಡಪಕ್ಷ ಮಾಜಿ ಹಣಕಾಸು ಸಚಿವ ಮತ್ತು ಶಾಸಕ ಭಾನುಲಾಲ್ ಸಹಾ ಅವರನ್ನು ರಾಜ್ಯಸಭಾ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿದೆ.