Advertisement

ಗೆಲುವು ಸಾಧಿಸಲು ಬಿಜೆಪಿ ರಣತಂತ್ರ

12:58 PM Mar 27, 2019 | Team Udayavani |

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿ ರಣತಂತ್ರವನ್ನು ಹೆಣೆಯಲಿದೆ ಎಂದು ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್‌.ಆಶೋಕ್‌ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಕಚೇರಿಗಳ ಸಂಕಿರ್ಣದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಅಶ್ವಥನಾರಾಯಣ್‌ ಅವರು ನಾಮಪತ್ರ ಸಲ್ಲಿಸಿದ ವೇಳೆ ಅವರ ಜೊತೆಗಿದ್ದು, ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ರಾಜ್ಯದಲ್ಲಿ 22 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು.

ನರೇಂದ್ರ ಮೋದಿ ಅವರು ರಾಜ್ಯದಲ್ಲಿ 7 ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್‌ 7ರಂದು ಮೈಸೂರು, ಚಿಕ್ಕಮಗಳೂರುಗಳಲ್ಲಿ ಸಭೆಗಳನ್ನು ಆಯೋಜಿಸಲಾಗಿದೆ ಎಂದರು.

ಸಿ.ಪಿ. ಯೋಗೇಶ್ವರ್‌ಗೆ ಟಿಕೆಟ್‌ ಸಿಗಲಿಲ್ಲವೇಕೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ನಾಯಕರನ್ನಾಗಿ ರೂಪಿಸುವ ಉದ್ದೇಶವಿದೆ. ಪಕ್ಷದಲ್ಲಿ ಯಾವ ಭಿನ್ನಾಭಿಪ್ರಾಯಗಳು ಇಲ್ಲ. ಒಗಟ್ಟಿನಿಂದಲೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.

ನಾವೇ ಗೆಲ್ಲುವ ವಿಶ್ವಾಸ: ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ್‌ ಮಾತನಾಡಿ, ಈ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಸೋತಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಕಡಿಮೆ ಅಂತರದಲ್ಲಿ ಸೋತರು. ಈ ಬಾರಿ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮುಖಂಡ ಸಿ.ಪಿ. ಯೋಗೇಶ್ವರ್‌ ಮಾತನಾಡಿ, ನರೇಂದ್ರ ಮೋದಿಯೇ ಖುದ್ದು ಸ್ಪರ್ಧಿಸಿದ್ಧಾರೆ ಎಂದು ಭಾವಿಸಿ ಕಾರ್ಯಕರ್ತರು ಮತದಾರರ ಮನವೊಲಿಸಬೇಕು ಎಂದರು. ಬಿಜೆಪಿ ಮುಖಂಡರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಪ್ಪ, ಮುನಿರಾಜುಗೌಡ, ಮಾಳವಿಕ, ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಕೆ. ಸೋಮಶೇಖರ್‌ ಮುಂತಾದವರು ಹಾಜರಿದ್ದರು.

ತಾಯಿ ಸಮಾಧಿಗೆ ನಮಸ್ಕಾರ: ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ್‌ ನಾಮಪತ್ರ ಸಲ್ಲಿಸುವ ಮುನ್ನ ತಮ್ಮ ತಾಯಿಯವರ ಪುಣ್ಯತಿಥಿಯಲ್ಲಿ ಭಾಗವಹಿಸಿ, ತಾಯಿಯವರ ಸಮಾಧಿಗೆ ನಮಸ್ಕರಿಸಿ ನಂತರ ನೇರವಾಗಿ ರಾಮನಗರಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.

ತಾಯಿ ಚಿಕ್ಕಮ್ಮ ಅವರು 11 ದಿನದ ಹಿಂದೆ ಅಗಲಿದ್ದರು. ಅವರ ಉತ್ತರ ಕ್ರಿಯಾದಿ ಭೂಶಾಂತಿ ಕಾರ್ಯಕ್ರಮಗಳಲ್ಲಿ ಮಂಗಳವಾರ ಭಾಗವಹಿಸಿ ನಂತರ ಅವರು ರಾಮನಗರಕ್ಕೆ ಆಗಮಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಶ್ವತ್ಥನಾರಾಯಣ ಆಸ್ತಿ 23.02 ಕೋಟಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಅವರ ಬಳಿ 32.52 ಲಕ್ಷ ರೂ. ಚರಾಸ್ತಿ ಮತ್ತು 22.70 ಕೋಟಿ ರೂ. ಮಾರುಕಟ್ಟೆ ಮೌಲ್ಯ ಸ್ಥಿರಾಸ್ತಿ ಇದೆ. ಒಟ್ಟು 23.02 ಕೋಟಿ ಇದೆ.
32.52 ಲಕ್ಷ ರೂ. ಚರಾಸ್ತಿ ಮತ್ತು 13.09 ಕೋಟಿ ರೂ. ಸ್ಥಿರಾಸ್ತಿ ಅಶ್ವತ್ಥನಾರಾಯಣ ಅವರ ಬಳಿ ಇದೆ. ಇವರ ಪತ್ನಿ ಎಂ.ಸುನಿತಾ ಅವರ ಬಳಿ 1.75 ಲಕ್ಷ ರೂ. ಮೌಲ್ಯದ ಚರಾಸ್ಥಿ ಮತ್ತು 3.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ದಂಪತಿಗಳು ವಾರ್ಷಿಕ ಆದಾಯವನ್ನು ಘೋಷಿಸಿಕೊಂಡಿಲ್ಲ. ಅಶ್ವತ್ಥನಾರಾಯಣ ಅವರು ತಮ್ಮ ಆದಾಯದ ಮೂಲವನ್ನು ಕೃಷಿ ಮತ್ತು ವ್ಯಾಪಾರ ಎಂದು ಘೋಷಿಸಿಕೊಂಡಿದ್ದಾರೆ. ಇವರ ಪತ್ನಿಯವರಿಗೆ ಬಾಡಿಗೆ ಆದಾಯವಿದೆ ಎಂದು ಹೇಳಿಕೊಂಡಿದ್ದಾರೆ.

ಅಶ್ವತ್ಥನಾರಾಯಣ ಅವರ ಬಳಿ ಸದ್ಯ 5 ಲಕ್ಷ ರೂ. ನಗದು ಹಣವಿದೆ. 1450 ಗ್ರಾಂ ಚಿನ್ನಾಭರಣ, 5530 ಗ್ರಾಂ ಬೆಳ್ಳಿ, ಇವರ ಪತ್ನಿಯವರ ಬಳಿ 75 ಸಾವಿರ ರೂ, 550 ಗ್ರಾಂ ಚಿನ್ನಾಭರಣ, 2510 ಬೆಳ್ಳಿ ಇದೆ. ಅಶ್ವತ್ಥನಾರಾಯಣ ಅವರು ತಮ್ಮ ಬಳಿ ಒಂದು ಸ್ಕೂಟರ್‌ ಮತ್ತು ಇನ್ನೋವ ಕಾರು ಇರುವುದಾಗಿ ಬರೆದುಕೊಂಡಿದ್ದಾರೆ.

ನೆಲಮಂಗಲ ತಾಲೂಕು ಹುಳ್ಳೇನಹಳ್ಳಿ, ಬೆಂಗಳೂರು ಉತ್ತರ ತಾಲೂಕು ದಾಸನಪುರ, ಕೆಂಗೇರಿ ಹೋಬಳಿಯ ರಾಮಸಂದ್ರ ಗ್ರಾಮದಲ್ಲಿ, ಯಶವಂತ ಪುರ ಹೋಬಳಿ ಮಲ್ಲತಹಳ್ಳಿಯಲ್ಲಿ 4 ಅಪರ್ಟ್‌ಮೆಂಟ್‌ನಲ್ಲಿ ಶೇ.50ರಷ್ಟು ಭಾಗ ಭೂಮಿ ಇದೆ.

ಪೊಲೀಸ್‌ ಎಸ್‌ಐ ಭುವಿತ ಎಂಬವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರೊಂದಿಗೆ ಅಶ್ವತ್ಥನಾರಾಯಣ ಅವರು ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿ, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡಿದ್ದಾರೆ ಎಂಬ ಕೇಸು ಮತ್ತು ಭೂಮಿ ಪರಿವರ್ತನೆ ಮಾಡದೆ ಮಾರಾಟ ಮಾಡಿರುವ ಬಗ್ಗೆ ಪ್ರಕರಣಗಳು ತಮ್ಮ ವಿರುದ್ಧ ಇದೆ ಎಂದು ಅಶ್ವತ್ಥನಾರಾಯಣ ಅವರ ನಾಮಪತ್ರದ ಜೊತೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next