ಮೈಸೂರು: ದಲಿತರೂ ಸೇರಿದಂತೆ ಎಲ್ಲರ ಬದುಕಿಗೂ ರಕ್ಷಣೆ ನೀಡಲು ಬದ್ಧವಾಗಿರುವ ಬಿಜೆಪಿಯನ್ನು ಎಲ್ಲರೂ ಬೆಂಬಲಿಸಿದರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹೇಳಿದರು.
ನಂಜನಗೂಡು ಉಪಚುನಾವಣೆ ಹಿನ್ನೆಲೆ ನಂಜನ ಗೂಡಿನ ಕತ್ವಾಡಿಪುರ, ಅಶೋಕಪುರಂ ಮತ್ತಿತರ ಸ್ಥಳಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರಸಾದ್ ಪರ ಪ್ರಚಾರ ನಡೆಸಿ ಮಾತನಾಡಿ, ದಲಿತರ ಸ್ವಾಭಿಮಾನಕ್ಕೆ ಗೌರವ ನೀಡಿ ಅವರ ಪ್ರತಿಭೆಗೆ ಬೆಲೆ ಕೊಡುವಲ್ಲಿ ಬಿಜೆಪಿ ಹೆಚ್ಚಿನ ಕಾಳಜಿ ವಹಿಸುತ್ತಿದೆ.
ಅಲ್ಲದೆ ದಲಿತ ಸಮುದಾಯದ ಹಲವು ಮುಖಂಡರು ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದು, ದಲಿತ ಸಮುದಾಯಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ ಬಹುಪಾಲು ಮುಂದಿದೆ ಎಂದರು. ಚುನಾವಣೆ ಸಮೀಪಿಸುವಾಗ ಕಾಂಗ್ರೆಸ್ಸಿಗರು ಮತದಾರರಿಗೆ ಹಣ ಹಾಗೂ ಇನ್ನಿತರ ಆಮಿಷಗಳನ್ನು ನೀಡಿ ಮತ ಪಡೆಯುತ್ತಾರೆ.
ಆದರೆ ಸಾರ್ವಜನಿಕರಿಗೆ ಅಗತ್ಯ ಸವಲತ್ತುಗಳನ್ನು ನೀಡಲು ಕಾಂಗ್ರೆಸ್ ವಿಫಲವಾಗಿದ್ದು, ಬಿಜೆಪಿ ಜನಪರ ಕೆಲಸಗಳನ್ನು ಮಾಡುತ್ತದೆ. ಆದ್ದರಿಂದ ಸಾರ್ವಜನಿಕರು ಈ ವಿಷಯಗಳನ್ನು ಅರ್ಥಮಾಡಿಕೊಂಡು ದಲಿತ ಸಮುದಾಯದ ಮತದಾರರು ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, ದಲಿತ ಸಮುದಾಯ ಯಾರ ಪರ ನಿಲ್ಲುತ್ತದೆ ಅವರು ಉಪ ಚುನಾವಣೆಯಲ್ಲಿ ಗೆಲ್ಲುತ್ತಾರೆ. ನಂಜನಗೂಡು ಕ್ಷೇತ್ರದಲ್ಲಿ ಸ್ವಾಭಿಮಾನ ಮತ್ತು ದುರಂಹಕಾರದ ನಡುವಿನ ಸಂಘರ್ಷ ತಲೆದೂರಿದ್ದು, ಇಲ್ಲಿ ಅಧಿಕಾರದ ಬಲವನ್ನು ಹತ್ತಿಕ್ಕಿ ಜನರು ಶ್ರೀನಿವಾಸ ಪ್ರಸಾದ್‌ರನ್ನು ಗೆಲ್ಲಿಸಬೇಕಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕೇಂದ್ರ ಸರ್ಕಾರದೊಂದಿಗೆ ಸಮ್ಮಿಲನ ಸಾಧಿಸಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಮಾಜಿ ಸಚಿವ ನಾರಾಯಣಸ್ವಾಮಿ, ರಾಜ್ಯ ಎಸ್ಸಿ ಮೋರ್ಚಾ ಕಾರ್ಯ ದರ್ಶಿ ರಮೇಶ್, ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಪಿ.ಬೋರೆಗೌಡ, ಮುಖಂಡರಾದ ಇತಿಹಾಸ್, ವೆಂಕಟೇಶ್, ದಾಸಯ್ಯ ಇದ್ದರು.