ಬೆಂಗಳೂರು: ನಾಯಕರ ಆಂತರಿಕ ಕಿತ್ತಾಟಕ್ಕೆ ನಲುಗಿ ಹೋಗಿರುವ ಬಿಜೆಪಿ ಈಗ “ಮನೆಯೊಂದು ಮೂರು ಬಾಗಿಲು’ ಎಂಬಂತಾಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಈವರೆಗೂ ಬಿಜೆಪಿ ನಾವಿಕನಿಲ್ಲದ ನೌಕೆಯಂತಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮರ್ ಕಟೀಲು ಅಭಿವೃದ್ಧಿ ಕೆಲಸಗಳಿಂದ ಮತ ಪಡೆಯುವ ಬದಲು ಹಿಂದುತ್ವ ಹೇಳಿಕೆಯಿಂದ ವೋಟು ಪಡೆಯಬೇಕೆಂಬ ಹೇಳಿಕೆ ನೀಡುತ್ತಾರೆ. ಈಗಾಗಲೇ ಯತ್ನಾಳ್ ಅವರು ಮುಖ್ಯಮಂತ್ರಿ ಹಾಗೂ ಸಚಿವರಾಗಲು ಕೋಟಿ ರೂ.ನೀಡಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೆಲ್ಲ ಉತ್ತರ ಕೊಡುವವರು ಯಾರು. ಯತ್ನಾಳ್ ಬಗ್ಗೆ ಬಿಜೆಪಿ ಮುಖಂಡರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಈಶ್ವರಪ್ಪ ಅವರು ಅಧಿಕಾರ ಕಳೆದುಕೊಂಡ ಮೇಲೆ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎಂದು ಹೇಳಿದ್ದರು. ಈ ಸರಕಾರದಲ್ಲಿ ಯಾವುದೂ ನಿಯಂತ್ರಣದಲ್ಲಿಲ್ಲ. ಹಳೆ ಬಿಜೆಪಿಯವರು ಮಾತನಾಡುತ್ತಿಲ್ಲ ಮುಖ್ಯಮಂತ್ರಿ ಬೊಮ್ಮಾಯಿ ಆ್ಯಂಡ್ ಕಂಪೆನಿ ದಳದಿಂದ ಹೋದವರ ಪಾರುಪತ್ಯ ನಡಿಯುತ್ತಿದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಕಾಲ ಕಳೆದರೆ ಸಾಕು ಅನ್ನುವ ರೀತಿಯಲ್ಲಿ ಇದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಮುಖಂಡರು ಜನಪರ ಕಾರ್ಯಕ್ರಮ ರೂಪಿಸದೆ ಕೇವಲ ಭಾವನಾತ್ಮಕ ವಿಚಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಜನರು ಇದಕ್ಕೆ ಮುಂಬರುವ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದರು.