ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿ ಮುಟ್ಟಲು ಬಿಜೆಪಿ ನಾಯಕರು ರಾಜ್ಯ ಪ್ರವಾಸ ಆರಂಭಿಸಿ ದ್ದಾರೆ. ಮತ್ತೂಂದೆಡೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮಧ್ಯೆ ವಾಕ್ಸಮರವೂ ಆರಂಭವಾಗಿದೆ.
ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ನೇತೃತ್ವದ ತಂಡ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದ ತಂಡ ಬುಧವಾರದಿಂದ ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.
ಪ್ರವಾಸ ಸಂದರ್ಭದಲ್ಲಿ ನಳಿನ್‌ಕುಮಾರ್ ಕಟೀಲ್ ಅವರು, ತಾನು ಜೈಲಿಗೆ ಹೋಗಬಾರದೆಂದು ಲೋಕಾಯುಕ್ತವನ್ನು ಸಿದ್ದರಾಮಣ್ಣ ಮುಚ್ಚಿದ್ದರು. ಆ ಇಲಾಖೆಗೆ ನಮ್ಮ ಸರಕಾರ ಮತ್ತೆ ಶಕ್ತಿ ತುಂಬಲಿದೆ. ರಾಜ್ಯದಲ್ಲಿ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಣ್ಣ ಎಂದು ಟೀಕಿಸಿದರು.
ಇದಕ್ಕೆ ಜಮಖಂಡಿಯಲ್ಲಿ ತಿರುಗೇಟು ನೀಡಿ ರುವ ಸಿದ್ದರಾಮಯ್ಯ, ನಳಿನ್‌ಕುಮಾರ್ ಒಬ್ಬ ವಿದೂ ಷಕ. ಪಾಪ ಅವರಿಗೆ ಇನ್ನೂ ಪ್ರಬುದ್ಧತೆ ಮೂಡಿಲ್ಲ ಎಂದು ಲೇವಡಿ ಮಾಡಿದರು.
ಅರ್ಕಾವತಿ ವಿಷಯ, ಲೋಕಾಯುಕ್ತ ಬಂದ್ ಮಾಡದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗು ತ್ತಿದ್ದರು ಎನ್ನುತ್ತಾರೆ. 2006ರಿಂದಲೂ ಯಾರ್ಯಾರ ಕಾಲದಲ್ಲಿ ಆಗಿರುವುದೆಲ್ಲಾ ತನಿಖೆ ನಡೆದರೆ ಎಲ್ಲರ ಬಂಡವಾಳ ತಿಳಿಯುತ್ತದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಡರ್ಟಿ ಪಾಲಿಟಿಕ್ಸ್ ಆರೋಪಕ್ಕೆ ಟ್ವೀಟ್ ಮೂಲಕ ಕುಟುಕಿರುವ ಕಾಂಗ್ರೆಸ್, ಯಾರದ್ದು ಡರ್ಟಿ ಪಾಲಿಟಿಕ್ಸ್? ಪೇಸಿಎಂ ಬಸವರಾಜ ಬೊಮ್ಮಾಯಿ ಅವರದ್ದೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಅರುಣ್ ಸಿಂಗ್ ಪ್ರವಾಸ
ಅರುಣ್ ಸಿಂಗ್ ಅವರು ಸೆ. 28 ರಂದು ಬೆಂಗಳೂರಿನಿಂದ ವಿಮಾನದಲ್ಲಿ ಕಲಬುರಗಿಗೆ ತೆರಳುವರು. ಅಲ್ಲಿ ಕಾರ್ಯಕರ್ತರ ಸಭೆಯ ಬಳಿಕ ಒಬಿಸಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುವರು. ಜೇವರ್ಗಿಯಲ್ಲಿ ಕಾರ್ಯಕರ್ತರ ಜತೆ ಸಮಾಲೋಚಿಸಿ ರಾತ್ರಿ ಬೀದರ್‌ಗೆ ತೆರಳಿ ಅಲ್ಲಿ ವಾಸ್ತವ್ಯ ಇರುವರು. ಸೆ. 29ರಂದು ಅವರು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಕಾಶಂಪುರದಲ್ಲಿ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸುವರು.