ಬೆಂಗಳೂರು: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯು ಕೋವಿಡ್ ಹರಡುವ ಮೂಲಕ ಜನರ ಪ್ರಾಣಬಲಿ ಪಡೆಯುವ ದುರುದ್ದೇಶದಿಂದ ಕೂಡಿದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಇದನ್ನೂ ಓದಿ:61 ಸಾವಿರ ಅಂಕಗಳ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಜಿಗಿತ
ಪಾದಯಾತ್ರೆ ಬಗ್ಗೆ ರಾಜ್ಯ ಹೈಕೋರ್ಟ್ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷದವರಿಗೆ ನ್ಯಾಯಾಂಗದ ಕುರಿತು ವಿಶ್ವಾಸ ಇದ್ದರೆ ಮತ್ತು ಜನರ ಜೀವದ ಬಗ್ಗೆ ಕಳಕಳಿ ಇದ್ದರೆ ತಕ್ಷಣ ತಮ್ಮ ಪಾದಯಾತ್ರೆಯನ್ನು ರದ್ದುಪಡಿಸಬೇಕು ಮತ್ತು ಕೋವಿಡ್ ಹೆಚ್ಚಿಸಲು ಕಾರಣವಾಗಿದ್ದಕ್ಕೆ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಪಾದಯಾತ್ರೆಯು ಡಿ.ಕೆ.ಶಿವಕುಮಾರ್ ಅವರ ಪ್ರತಿಷ್ಠೆಯ ಪಾದಯಾತ್ರೆಯಂತಿದೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಸರಕಾರದ ಅನಪೇಕ್ಷಿತ ವಿಳಂಬ ಮತ್ತು ಬಿಜೆಪಿ ಸರಕಾರದ ಬದ್ಧತೆಯ ಅರಿವಿದ್ದರೂ ಪಾದಯಾತ್ರೆ ಮುಂದುವರಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರಕಾರವು ನೆಲ, ಜಲ, ಭಾಷೆಯ ವಿಚಾರದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಸದಾ ಜನಪರ ಕಾರ್ಯಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.