ಬೆಂಗಳೂರು: ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ತಾತ್ಕಾಲಿಕ ಅಷ್ಟೇ. ಮುಂದಿನ ದಿನಗಳಲ್ಲಿ ಬೆಲೆ ಕಡಿಮೆಯಾಗಲಿದೆ. ಟೊಮೆಟೊ, ಪೆಟ್ರೊಲ್, ಡಿಸೆಲ್, ಈರುಳ್ಳಿ ಒಂದು ವಸ್ತುವಿನ ಬೆಲೆ ಮೇಲೆ ಮಾತ್ರ ಪ್ರಶ್ನೆ ಮಾಡಿದರೆ ನಾನು ಉತ್ತರ ನೀಡಲು ಆಗುವುದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಮೋದಿ ಸರ್ಕಾರ ಅನೇಕ ಯೋಜನೆ ಮಾಡಿದೆ. ರೈತರ ಖಾತೆಗಳಿಗೆ ಆರು ಸಾವಿರ ರೂ. ಹಾಕುತ್ತಿದ್ದಾರೆ. ಆಯುಷ್ಮಾನ್ ಭಾರತ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ಜಲ ಮಿಷನ್ ಯೋಜನೆ ಮಾಡಲಾಗಿದೆ. ಈ ಎಲ್ಲಾ ಯೋಜನೆ ಮೂಲಕ ಬಡವರಿಗೆ ಅನುಕೂಲವಾಗಿದೆ. ಸರ್ಕಾರಕ್ಕೆ ತೆರಿಗೆ ಸಂಗ್ರಹ ಆಗಬೇಕಿದೆ, ಆಗುತ್ತಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ:ಗ್ಯಾಸ್ ದರ 886 ರೂ…ಇದೇ ಮೋದಿ ಅಚ್ಚೇ ದಿನ್; ಸಿದ್ದರಾಮಯ್ಯ ವ್ಯಂಗ್ಯ
ಯುಪಿಎ ಸರ್ಕಾರ ಇದ್ದಾಗಲೂ ಬೆಲೆ ಏರಿಕೆಯಾಗಿತ್ತು. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ನೂರು ದಿನಗಳಲ್ಲಿ ಬೆಲೆ ನಿಯಂತ್ರಣ ಮಾಡುವುದಾಗಿ ಹೇಳಿದ್ದರು. ಆದರೆ ಅದು ಅವರಿಂದ ಆಗಿರಲಿಲ್ಲ, 15% ನಷ್ಟು ಬೆಲೆ ಏರಿಕೆಯಾಗಿತ್ತು. ಆದರೆ ಮೋದಿ ಅವಧಿಯಲ್ಲಿ ಬೆಲೆ ನಿಯಂತ್ರಣದಲ್ಲಿದೆ ಎಂದು ಅರುಣ್ ಸಿಂಗ್ ಹೇಳಿದರು.
ಸೀಟು ಗೆಲ್ಲುವ ಗುರಿ: ನಾನು ಪಕ್ಷ ಬಲಪಡಿಸುವ ಸಲುವಾಗಿ ಟೂರ್ ಮಾಡಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸಲು ಸಭೆ ಮಾಡಲಾಗಿದೆ. ಜೊತೆಗೆ ಮೋದಿ ಯೋಜನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಕಾರ್ಯಕರ್ತರಿಗೆ ತಿಳಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲುದು ನಮ್ಮ ಗುರಿ ಎಂದು ಅರುಣ್ ಸಿಂಗ್ ಹೇಳಿದರು.
ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಈಗಾಗಲೇ ಮಾತಾಡಿದ್ದೇನೆ. ಅವರು ಗೌರವದಿಂದ ಮಾತನಾಡಬೇಕು. ನಾವು ಹಳೆ ಮೈಸೂರು ಹೆಚ್ಚು ಸೀಟ್ ಗೆಲ್ಲಲು ಸಂಪೂರ್ಣ ಶ್ರಮ ಹಾಕುತ್ತೇವೆ. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ನಮ್ಮ ಹೋರಾಟ ಇರಲಿದೆ ಎಂದರು.