Advertisement
ಯಡಿಯೂರಪ್ಪ ಅವರು ಮೇಲುಗೈ ಸಾಧಿಸಿದರೆ, ಅವರ ವಿರುದ್ಧ ತೊಡೆತಟ್ಟಿದ್ದ ಕೆ.ಎಸ್.ಈಶ್ವರಪ್ಪ ಅವರು ಮೊದಲ ದಿನ ಅಕ್ಷರಶಃ ಏಕಾಂಗಿಯಾಗುಳಿದರು.
Related Articles
ಕಾರ್ಯಕಾರಿಣಿಯ ಗೋಷ್ಠಿಯ ಸಂದರ್ಭದಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ವಿಧಾನಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ ಅವರನ್ನು ದಲಿತ ನಾಯಕರು, ಅಸ್ಪ್ರಶ್ಯತೆ ವಿರುದ್ಧ ಹೋರಾಟ ಮಾಡಿದವರು ಎಂದರು. ಇದರಿಂದ ಬೇಸರಗೊಂಡ ಶಾಣಪ್ಪ, “ಅಲ್ಲಮ್ಮಾ, ನಮ್ಮನ್ನು ಇನ್ನೂ ದಲಿತ ನಾಯಕರು ಅಂತಲೇ ಗುರುತಿಸುತ್ತೀರಲ್ಲಾ, ಬಿಜೆಪಿ ನಾಯಕರು ಎಂದೇಕೆ ಹೇಳುವುದಿಲ್ಲ’ ಎಂದು ನಯವಾಗಿಯೇ ತರಾಟೆಗೆ ತೆಗೆದುಕೊಂಡರು.
Advertisement
ಬಳಿಕ, ತಮ್ಮ ಮಾತಿನುದ್ದಕ್ಕೂ ಯಡಿಯೂರಪ್ಪ-ಈಶ್ವರಪ್ಪ ಅವರ ಕಿವಿಹಿಂಡಿದ ಶಾಣಪ್ಪ, ಮಿಷನ್ 150 ಸಾಧ್ಯವಾಗಬೇಕಿದ್ದರೆ ನಾಯಕರೆನಿಸಿಕೊಂಡವರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದರು. ತಮ್ಮ ಮಾತು ರಾಜ್ಯ ಉಸ್ತುವಾರಿ ಮುರಳೀಧರರಾವ್, ಸಹ ಪ್ರಭಾರಿ ಪುರಂದರೇಶ್ವರಿಗೆ ಅರ್ಥವಾಗಲಿ ಎಂಬ ಕಾರಣಕ್ಕೆ ಇಂಗ್ಲೀಷ್‌ನಲ್ಲಿ ಮಾತನಾಡಿ ಗಮನ ಸೆಳೆದರು.
ಕಣ್ಣೆತ್ತಿಯೂ ನೋಡದ ಬಿಎಸ್ವೈಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದ ವೇದಿಕೆಗೆ ತಡವಾಗಿ ಬಂದ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದ ಗೌಡ ಸೇರಿದಂತೆ ವೇದಿಕೆಯಲ್ಲಿದ್ದವರೆಲ್ಲ ಎದ್ದು ನಿಂತು ಬರಮಾಡಿಕೊಂಡರು. ಆದರೆ, ಆ ಸಂದರ್ಭದಲ್ಲಿ ಕರಡು ನಿರ್ಣಯಕ್ಕೆ ಅಂತಿಮ ರೂಪ ಕೊಡುತ್ತಿದ್ದ ಬಿ.ಎಸ್.ಯಡಿಯೂರಪ್ಪ ಅವರು ಈಶ್ವರಪ್ಪ ಅವರನ್ನು ತಲೆ ಎತ್ತಿಯೂ ನೋಡಲಿಲ್ಲ. ಹೀಗಾಗಿ, ಯಡಿಯೂರಪ್ಪಗೆ ಹಸ್ತಲಾಘವ ಮಾಡಲು ಹೋಗಿದ್ದ ಈಶ್ವರಪ್ಪ ಅವರು ಕೈಮುಗಿದು ತಮ್ಮ ಸ್ಥಾನಕ್ಕೆ ಬಂದು ಕುಳಿತರು. ಈಶ್ವರಪ್ಪ ಹೆಸರೇಳದ ಯಡಿಯೂರಪ್ಪ
ಕಾರ್ಯಕಾರಿಣಿಯ ಅಧ್ಯಕ್ಷೀಯ ಭಾಷಣದ ಸರದಿ ಬಂದಾಗ ಯಡಿಯೂರಪ್ಪ ಅವರು, ವೇದಿಕೆಯಲ್ಲಿದ್ದ ರಾಜ್ಯ ಉಸ್ತುವಾರಿ ಹಾಗೂ ಕೇಂದ್ರ ಸಚಿವರ ಹೆಸರುಗಳನ್ನಷ್ಟೇ ಹೇಳಿದರು. ಕೆ.ಎಸ್.ಈಶ್ವರಪ್ಪ ಅವರ ಹೆಸರು ಹೇಳಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಎರಡೂ ಮನೆಯ ಪ್ರತಿಪಕ್ಷ ನಾಯಕರೇ ಎನ್ನುವ ಮೂಲಕ ಜಗದೀಶ್ ಶೆಟ್ಟರ್ ಹೆಸರನ್ನೂ ಬಿಟ್ಟು ಜಾಣ್ಮೆ ಮೆರೆದರು. “ಸಂತೋಷ’ದ ಫ್ಲೆಕ್ಸ್ ತೆರವು:
ರಾಜೇಂದ್ರ ಕಲಾಮಂದಿರ ಎದುರಿನ ರಾಮಾನುಜ ರಸ್ತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜಾÂಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರಗಳಿದ್ದ ಫ್ಲೆಕ್ಸ್‌ಗಳಲ್ಲಿ “ಪಕ್ಷದ ಗೆಲುವಿಗೆ ಸಂತೋಷವೇ ಸೂತ್ರ ದಾರಿ’ ಎಂಬ ಅಡಿ ಬರಹ ಹಾಕಲಾಗಿತ್ತು. ಆದರೆ, ಸ್ವತ್ಛನಗರಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಬ್ಯಾನರ್ ಕಟ್ಟಬಾರದು ಎಂಬ ಕಾರಣಕ್ಕೆ ಇದನ್ನು ತೆರವುಗೊಳಿಸಲಾಯಿತು. ಮಾಧ್ಯಮ ಕೇಂದ್ರ ಎತ್ತಂಗಡಿ
ಕಾರ್ಯಕಾರಿಣಿ ಆಯೋಜನೆ ಸಂದರ್ಭದಲ್ಲಿ ರಾಜೇಂದ್ರ ಕಲಾಮಂದಿರದ ಕೆಳಮಹಡಿಯ ಕೋಣೆಯಲ್ಲೇ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಾಧ್ಯಮವನ್ನು ಹೊರಗಿಡುವಂತೆ ರಾಜ್ಯ ಉಸ್ತುವಾರಿ ಮುರಳೀಧರರಾವ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದ ನಂತರ ಮಾಧ್ಯಮದವರನ್ನು ಹೊರ ಕಳುಹಿಸಿ, ಕಾರ್ಯಕಾರಿಣಿಯ ವಿವರಗಳನ್ನು ಒದಗಿಸುವ ಕೆಲಸವನ್ನು ದೂರದ ಹೋಟೆಲ್‌ಗೆ ಸ್ಥಳಾಂತರಿಸಲಾಯಿತು. – ಗಿರೀಶ್ ಹುಣಸೂರು