Advertisement

ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆಕ್ಷೇಪ

03:13 PM Jun 26, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಆಡಳಿತ ಮಾಡಿದ್ದ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆ ಕೋವಿಡ್‍ನಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಸಹಾಯಹಸ್ತ ನೀಡುವ ಬದಲು ಕೇವಲ ಋಣಾತ್ಮಕವಾಗಿ ಟೀಕೆ ಟಿಪ್ಪಣಿ ಮಾಡುತ್ತಾ ಬಂದಿದೆ. ಅದರಲ್ಲೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತಾನು ಆಯ್ಕೆಯಾದ ಕ್ಷೇತ್ರಕ್ಕೂ ಹೋಗದೆ ಕೇವಲ ಟ್ವಿಟರ್‍ಗೆ ಸೀಮಿತರಾಗಿ ರಾಜಕೀಯ ಟೀಕೆ ಮಾಡಲು ತಮ್ಮನ್ನು ತೊಡಗಿಸಿಕೊಂಡಿದ್ದನ್ನು ಇಂದಿನ ಸಭೆ ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸುವ ನಿರ್ಣಯ ಅಂಗೀಕರಿಸಿದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.

Advertisement

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ.

ಬೆಳಿಗ್ಗೆ ನಡೆದ ಸಭೆಯಲ್ಲಿ ಪ್ರಮುಖವಾಗಿ ಎರಡು ರಾಜಕೀಯ ನಿರ್ಣಯಗಳನ್ನು ಮಂಡಿಸಲಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡಿದೆ. ರಾಜ್ಯದಲ್ಲಿ ಕೋವಿಡ್‍ ದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಒಂದು ಲಕ್ಷ ರೂ ನೀಡುವ ಮಹತ್ವದ ನಿರ್ಧಾರದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಕ್ಯಾ.ಕಾರ್ಣಿಕ್ ವಿವರಿಸಿದರು.

ಇದನ್ನೂ ಓದಿ:ಆರ್ ಎಸ್ಎಸ್ ನಾಯಕರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ: ಕುತೂಹಲ ಕೆರಳಿಸಿದ ಸಾಹುಕಾರ್ ನಡೆ

ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಮತ್ತು ದೌರ್ಜನ್ಯ ಮಾಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರಕಾರದ ಕ್ರಮಗಳು, ಅಲ್ಲಿನ ರಾಜ್ಯಪಾಲರ ಜೊತೆ ಮಮತಾ ಅವರು ನಡೆದುಕೊಂಡ ರೀತಿ, ಕೇಂದ್ರದ ಜೊತೆಗೆ ಅಸಹಕಾರವನ್ನು ಖಂಡಿಸುವ ಮತ್ತು ಅಲ್ಲಿ ಮೃತರಾದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಹಿಂಸೆ, ದೌರ್ಜನ್ಯವನ್ನು ಅನುಭವಿಸಿದ ಕುಟುಂಬಗಳಿಗೆ ನಾವು ನಿಮ್ಮ ಜೊತೆಗಿದ್ದೇವೆ ಎಂದು ತಿಳಿಸುವ ಹಾಗೂ ಕೇಂದ್ರ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸುವ ನಿರ್ಣಯವನ್ನು ಮಂಡಿಸಲಾಗಿದೆ ಎಂದರು.

Advertisement

ಇಂದಿನ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ವಿವಿಧ ಜಿಲ್ಲೆಗಳ ಅಪೇಕ್ಷಿತರು ವೆಬೆಕ್ಸ್ ಮೂಲಕ ಭಾಗವಹಿಸುತ್ತಿದ್ದಾರೆ. ಇದೊಂದು ರೀತಿಯ ಹೈಬ್ರಿಡ್ ಸಭೆಯಾಗಿದೆ. ಕಾರ್ಯಕಾರಿಣಿಯನ್ನು ಮುಖ್ಯಮಂತ್ರಿಗಳು ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಗೃಹ ಕಛೇರಿಯಿಂದ ವೆಬೆಕ್ಸ್ ಮೂಲಕ ಭಾಗವಹಿಸಿ ಮಾರ್ಗದರ್ಶನ ಮಾಡಿ ಉದ್ಘಾಟನೆ ಮಾಡಿದ್ದಾರೆ. ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ದೆಹಲಿಯಿಂದ ವೆಬೆಕ್ಸ್ ಮೂಲಕ ಭಾಗವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರೂ ವೆಬೆಕ್ಸ್ ಮೂಲಕ ಭಾಗವಹಿಸಿದ್ದರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next