Advertisement

ಶ್ರೀರಾಮುಲು-ರೆಡ್ಡಿಯಿಂದ ಬಿಜೆಪಿ ಹಾಳು

07:40 AM Feb 25, 2019 | Team Udayavani |

ಮೊಳಕಾಲ್ಮೂರು: ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಿಂದ ಆಹ್ವಾನವಿದ್ದು, ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿ ಯಾವ ಪಕ್ಷ ಸೇರಬೇಕೆಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ ಹೇಳಿದರು.

Advertisement

ತಾಲೂಕಿನ ಹಾನಗಲ್‌ ಪ್ರವಾಸಿಮಂದಿರದ ಆವರಣದಲ್ಲಿ ಎಸ್‌. ತಿಪ್ಪೇಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು .

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಿಜೆಪಿ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿ ಕೈಕೊಟ್ಟರು. ನಾನು ನಂಬಿಕೆ ಇಟ್ಟುಕೊಂಡಿದ್ದ ಶಾಸಕ ಬಿ. ಶ್ರೀರಾಮುಲು ನಿಮಗೆ ಬಿಜೆಪಿ ಟಿಕೆಟ್‌ ನೀಡುವುದು ಖಚಿತ. ರಕ್ತದಲ್ಲಿ ಬೇಕಾದರೂ ಬರೆದುಕೊಡುತ್ತೇನೆಂದು ತಿಳಿಸಿ ವಂಚಿಸಿದ್ದಾರೆ. ಶಾಸಕ ಬಿ. ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಂದ ಬಿಜೆಪಿ ಹಾಳಾಗುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

ನನ್ನ ಬೆಂಬಲಕ್ಕೆ ನಿಂತ ಎಸ್‌ಸಿ-ಎಸ್‌ಟಿ ಹಾಗೂ ಹಿಂದುಳಿದ ಅಲ್ಪಸಂಖ್ಯಾತರು ಸೇರಿದಂತೆ ಇನ್ನಿತರ ಅಮಾಯಕರ ಮೇಲೆ ಲಾಠಿ ಪ್ರಹಾರ ಮಾಡಿಸಿ ಅವರನ್ನು ಜೈಲಿಗಟ್ಟಿದರು. ಇಂತಹ ವಂಚಕರ ಸಹವಾಸದಿಂದ ದೂರ ಉಳಿದು ಕಾರ್ಯಕರ್ತರ ತೀರ್ಮಾನದಂತೆ ಮುಂದುವರೆಯುತ್ತೇನೆ ಎಂದರು.

ಕ್ಷೇತ್ರದಲ್ಲಿ ಭೀಕರ ಬರ ಆವರಿಸಿ ಮೇವು, ನೀರಿನ ಕೊರತೆ ಎದುರಾಗಿದ್ದರೂ ಗೋಶಾಲೆ ಪ್ರಾರಂಭಿಸಿ ಜನರ ಸಮಸ್ಯೆ ನಿವಾರಣೆ ಮಾಡಿಲ್ಲ. ಜನರ ಕೈಗೆ ಸಿಗದೆ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರ ಬಗ್ಗೆ ಜನರು ಜಾಗರೂಕರಾಗಿರಬೇಕು. ಮುಂದಿನ ದಿನಗಳಲ್ಲಿ ಕ್ಷೇತ್ರದ ಸರ್ವ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. 

Advertisement

ಜಿಪಂ ಮಾಜಿ ಸದಸ್ಯ ಕೆ. ಜಗಲೂರಯ್ಯ ಮಾತನಾಡಿ, ಚುನಾವಣೆಯಲ್ಲಿ ಸೋಲು-ಗೆಲುವು ಅನಿವಾರ್ಯ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಜನಸಾಮಾನ್ಯರು ಯಾರನ್ನೂ ಕೇಳದಂತಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಗ್ಗೆ ಒಲವಿದ್ದು, ತಿಪ್ಪೇಸ್ವಾಮಿಯವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ವೆಂಕಟೇಶ್‌ ಹಾಗೂ ಚಲನಚಿತ್ರ ನಿರ್ದೇಶಕ ಜಿ. ಶ್ರೀನಿವಾಸಮೂರ್ತಿ ಮಾತನಾಡಿದರು. ಸಭೆಗೆ ಆಗಮಿಸಿದ್ದ ಬಹುತೇಕ ಜನರು, ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ಮುಖಂಡರಾದ ರಾಜಶೇಖರ ಗಾಯಕವಾಡ್‌, ಎಸ್‌.ಟಿ. ಚಂದ್ರಣ್ಣ, ಗುರುರಾಜ್‌, ನಿಂಗಣ್ಣ, ಕಲ್ಲೇಶ್‌, ವೈ.ಡಿ. ಬಸವರಾಜ್‌, ಡಿ.ಒ. ಮುರಾರ್ಜಿ, ಜಿ.ಪಿ. ಸುರೇಶ್‌, ಕೌಸರ್‌ ಬೇಗ್‌, ಡಿ.ಸಿ.ನಾಗರಾಜ್‌, ಡಿ. ಬಸವರಾಜ್‌, ಜಿ. ಮಂಜುನಾಥ, ಕರಿಬಸಪ್ಪ, ಆರ್‌. ಮಲ್ಲಿಕಾರ್ಜುನ, ಕೆ.ಜಿ.ನಾಗರಾಜ್‌ ಮತ್ತಿತರರು ಇದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸರ್ಕಾರ ಇದ್ದಾಗ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಆದರೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದವರು, ನಾಚಿಕೆ ಮಾನ ಮರ್ಯಾದೆ ಇಲ್ಲದವರು ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ತಾವು ಮಾಡಿದ್ದಾಗಿ ಸುಳ್ಳು ಹೇಳುತ್ತಿರುವುದು ನಾಚಿಕೆಗೇಡು. 
 ಎಸ್‌. ತಿಪ್ಪೇಸ್ವಾಮಿ, ಮಾಜಿ ಶಾಸಕ. 

Advertisement

Udayavani is now on Telegram. Click here to join our channel and stay updated with the latest news.

Next