Advertisement

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

01:22 AM Aug 24, 2024 | Team Udayavani |

ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿಯಲ್ಲಿ ಎಐಸಿಸಿ ಕಚೇರಿ ಎದುರು ಧರಣಿ ನಡೆಸಲು ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ. ಈ ಮೂಲಕ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು ನೀಡುವ ತಂತ್ರ ರೂಪಿಸಿರುವ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಲು ಮುಂದಾಗಿದೆ.

Advertisement

ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಶುಕ್ರವಾರ ಈ ವಿಷಯ ಪ್ರಸ್ತಾವಿಸಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ರಾಷ್ಟ್ರೀಯ ನಾಯಕರ ಒಪ್ಪಿಗೆ ಪಡೆದು ದಿಲ್ಲಿಯಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ.

ಭ್ರಷ್ಟಾಚಾರದ ವಿರುದ್ಧ “ಶೂನ್ಯ ಸಹಿಷ್ಣುತೆ’ ಎಂದು ಘೋಷಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರಿಗೆ ಸಿದ್ದರಾಮಯ್ಯ ಪ್ರಕರಣ ಮುಂದಿಟ್ಟುಕೊಂಡು ಮುಜುಗರ ಉಂಟುಮಾಡುವುದರ ಜತೆಗೆ ಕಾಂಗ್ರೆಸ್‌ ದಲಿತ ವಿರೋಧಿ ನೀತಿಯನ್ನು ದಿಲ್ಲಿಮಟ್ಟದಲ್ಲಿ ಅನಾವರಣಗೊಳಿಸುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ.

ಈ ಸಂಬಂಧ “ಉದಯವಾಣಿ’ ಜತೆಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಇಷ್ಟೆಲ್ಲ ದಾಖಲೆಗಳು ಹೊರಬರುತ್ತಿದ್ದರೂ ರಾಹುಲ್‌ ಗಾಂಧಿ ಇದುವರೆಗೆ ತುಟಿ ಬಿಚ್ಚಿಲ್ಲ. ಅವರು ಭ್ರಷ್ಟಾಚಾರದ ಪರವೋ ವಿರುದ್ಧವೋ ಎಂಬುದು ಗೊತ್ತಾಗಬೇಕಿದೆ. ಅದೇ ರೀತಿ ರಾಜ್ಯದಲ್ಲಿ ದಲಿತ ವಿರೋಧಿ ನಿಲುವನ್ನು ಸರಕಾರ ಪದೇಪದೆ ತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರನ್ನು ದಿಲ್ಲಿಗೆ ಹೋಗಿ ಪ್ರಶ್ನಿಸಬೇಕಿದೆ ಎಂದರು.

ಎಐಸಿಸಿ ಕಚೇರಿ ಎದುರು ಎರಡು ದಿನ ಪ್ರತಿಭಟನೆ ನಡೆಸಬೇಕೆಂಬ ಉದ್ದೇಶವಿದೆ. ಪ್ರತಿಭಟನೆ ಕೇವಲ ಕಾಂಗ್ರೆಸ್‌ನ ಹಕ್ಕಲ್ಲ. ಆಡಳಿತದಲ್ಲಿ ಇದ್ದುಕೊಂಡು ಇವರು ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿಲ್ಲವೇ? ಹೀಗಾಗಿ ನಾವು ನಮ್ಮದೇ ಮಾರ್ಗದಲ್ಲಿ ತಿರುಗೇಟು ನೀಡುತ್ತೇವೆ. ಶನಿವಾರ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

Advertisement

ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ರಾಜೀ ನಾಮೆ ಪಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಸರಕಾರ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿದೆ. ಅವರು ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಅವರು ಕೊಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next