ಹುಬ್ಬಳ್ಳಿ: “ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಸರ್ಕಾರ ಬೀಳುತ್ತದೆ ಎಂದು ಕಥೆ ಹೇಳುತ್ತಲೇ ಬರುತ್ತಿದ್ದಾರೆ. ಮೇ 23ರಂದು ಅಚ್ಚರಿ ಫಲಿತಾಂಶ ಹೊರಬೀಳಲಿದ್ದು, ಆಗ ಇವರೆಲ್ಲರ ಬಾಯಿ ಮುಚ್ಚುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, “ಬಿಜೆಪಿಯವರ ಹೇಳಿಕೆಗಳ ದಾಟಿ ನೋಡಿದರೆ ಅವರ ಹಣೆಬರಹ ಗೊತ್ತಾಗುತ್ತದೆ. ರಾಜ್ಯ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಬಿಜೆಪಿಯವರು ಮೈತ್ರಿ ಸರ್ಕಾರ ಬೀಳುತ್ತೆ ಎಂದು ಬರೀ ಮಾತಲ್ಲೇ ಹೇಳುತ್ತಿದ್ದಾರೆ. ಅವರ ಹತ್ತಿರ ಶಾಸಕರ ಬೆಂಬಲ ಇದ್ದರೆ ಸರ್ಕಾರ ಮಾಡಿ ತೋರಿಸಲಿ. ದೀಪಾವಳಿ, ಸಂಕ್ರಾತಿ ಎಲ್ಲವೂ ಮುಗಿದಿದೆ. ಅವರಿಗೆ ತಾಕತ್ತಿದ್ದರೆ ಇಷ್ಟೊತ್ತಿಗಾಗಲೇ ಸರ್ಕಾರ ರಚನೆ ಮಾಡಬೇಕಿತ್ತು’ ಎಂದರು.
ಸ್ಥಳೀಯ ಮಟ್ಟದಲ್ಲಿ ಕೆಲವರು ಪಕ್ಷಾಂತರ ಮಾಡಬಹುದು. ಹಾಗಂತ ಯಾವುದೇ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಿಲ್ಲ. ಕುಂದಗೋಳ ಕ್ಷೇತ್ರದಲ್ಲಿ ಅನೇಕ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇನ್ನೂ ಅನೇಕರು ಸೇರುವವರಿದ್ದಾರೆ. ರಮೇಶ ಜಾರಕಿಹೊಳಿಗೆ ವೈಯಕ್ತಿಕ ಅಸಮಾಧಾನವಿದೆ. ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಬಿಜೆಪಿಯವರೇ ಹಣ, ಹೆಂಡದ ಹೊಳೆ ಹರಿಸುತ್ತಿದ್ದಾರೆ. ಬಿಜೆಪಿ ಅಂದರೆ ಭ್ರಷ್ಟಾಚಾರ. ಬಿ ಅಂದ್ರೆ ಭ್ರಷ್ಟಾಚಾರಿ ಜನತಾ ಪಕ್ಷ ಎಂದರು.
160 ಸೀಟು ದಾಟಲ್ಲ: ಲೋಕಸಭೆ ಚುನಾವಣೆ ಮೊದಲ 5 ಹಂತಗಳ ಮತದಾನದ ಬಳಿಕ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿರುವ ಮಾಹಿತಿ ಇದೆ. ಆದರೆ ಸಮೀಕ್ಷಾ ವರದಿಗಳನ್ನು ಬಹಿರಂಗಪಡಿಸಿಲ್ಲ. 7 ಹಂತಗಳ ಮತದಾನ ಮುಗಿದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 160 ಸೀಟುಗಳನ್ನು ದಾಟುವುದಿಲ್ಲ. ಇದು ಬಿಜೆಪಿ ಮುಖಂಡರನ್ನು ಕಂಗೆಡಿಸಿದೆ.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಯ ಎಲ್ಲ ಮುಖಂಡರು ಹತಾಶೆಯಿಂದ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಮೇ 23ರ ನಂತರ ದೇಶದಲ್ಲಿ ಎನ್‌ಡಿಎ ಸರ್ಕಾರ ಪತನವಾಗುತ್ತೆ. ರಾಜ್ಯದಲ್ಲಿ ಬರವಿದ್ದರೂ ಚುನಾವಣೆ ಆಯೋಗ ಬರ ಅಧ್ಯಯನ ಮಾಡಲು ಬಿಡುತ್ತಿಲ್ಲ. ನಮಗೆ ನಿರ್ಬಂಧ ಹಾಕಿದೆ. ಇದು ದುರ್ದೈವದ ಸಂಗತಿ. ಕೇಂದ್ರ ಸರ್ಕಾರ ಬರ ಪರಿಹಾರ ಕಾಮಗಾರಿಗೆ ದುಡ್ಡು ಕೊಟ್ಟಿಲ್ಲ. ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದರು.