ಮಂಗಳೂರು: ವಿಪಕ್ಷ ನಾಯಕ ಸ್ಥಾನದಿಂದ ಆರ್.ಅಶೋಕ್ ಅವರನ್ನು ಕೆಳಗಿಳಿಸಬೇಕು ಎಂದು ಬಜರಂಗದಳವು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಮಾಡಿದೆ.
ಅಶೋಕ್ ಅವರು ವಿಧಾನ ಸಭೆ ಅಧಿವೇಶನದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎನ್ನುವ ಮೂಲಕ ಸಂಘಟನೆಯ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದು, ಅವರನ್ನು ತತ್ ಕ್ಷಣ ವಿಪಕ್ಷ ನಾಯಕ ಸ್ಥಾನದಿಂದ ಇಳಿಸಬೇಕು, ಅವರು ಕೂಡಲೇ ರಾಜ್ಯದ ಹಿಂದೂ ಕಾರ್ಯಕರ್ತರ ಕ್ಷಮೆ ಕೇಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್ ಅವರು ವಿಜಯೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಮಂಗಳೂರಿನ ಖಾಸಗಿ ಶಾಲೆಯ ಶಿಕ್ಷಕಿಯಿಂದ ಹಿಂದೂ ಧರ್ಮ ನಿಂದನೆ ,ಆ ಬಳಿಕ ಪ್ರತಿಭಟಿಸಿದ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಾದ ವಿಚಾರದ ಕುರಿತು ಸದನದಲ್ಲಿ ಕಾವೇರಿದ ಚರ್ಚೆಯ ವೇಳೆ ಆರ್. ಅಶೋಕ್ ಅವರು ನೀಡಿದ ಹೇಳಿಕೆ ವಿರುದ್ಧ ಬಜರಂಗದಳ ಆಕ್ರೋಶ ಹೊರ ಹಾಕುತ್ತಿದೆ.
”ನಾನು ಗೃಹ ಸಚಿವನಾಗಿದ್ದ ವೇಳೆ ನನ್ನ ಮೇಲೂ ಒತ್ತಡವಿತ್ತು, ನಾನು ಹಿಂದೆ ಮುಂದೆ ನೋಡಲಿಲ್ಲ. ಅವರೆಲ್ಲರ ಮೇಲೆ ಗೂಂಡಾ ಕಾಯ್ದೆ ಹಾಕಿದೆ. ಆ ತರ ನೀವು ನಿಲುವು ತೆಗೆದುಕೊಳ್ಳಬೇಕು” ಎಂದು ವಿಧಾನಸಭೆಯಲ್ಲಿ ಸರಕಾರಕ್ಕೆ ಆರ್. ಅಶೋಕ್ ಮಾರ್ಗದರ್ಶನ ನೀಡಿದ್ದರು. ಆ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಜರಂಗದಳ ಮುಖಂಡರು ”ಅಡ್ಜಸ್ಟ್ ಮೆಂಟ್ ಅಶೋಕ್” ಎಂದು ಹೆಸರು ಬದಲಾಯಿಸಿ ಎಂದು ಆಕ್ರೋಶ ಹೊರ ಹಾಕಿ ದ್ದಾರೆ. ಸಂಘಪರಿವಾರದ ಹಲವು ಕಾರ್ಯಕರ್ತರು ಕೂಡ ಆಕ್ರೋಶ ಹೊರ ಹಾಕಿದ್ದಾರೆ.
2009 ಜನವರಿ 24ರಂದು, ಶ್ರೀರಾಮಸೇನೆ ಕಾರ್ಯಕರ್ತರು ಮಂಗಳೂರಿನ ಪಬ್‌ನಲ್ಲಿ ಯುವಕ ಯುವತಿಯರ ಗುಂಪಿನ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದ್ದ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.