ಭೋಪಾಲ್: ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಎರಡೂ ಪಟ್ಟಿಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೆಸರು ಕಾಣಿಸುತ್ತಿಲ್ಲ. ಈ ಬಾರಿ ಚೌಹಾಣ್ ಅವರನ್ನು ಕೈಬಿಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲೇ ಚೌಹಾಣ್ ಆಡಿರುವ ಮಾತುಗಳು ಇದಕ್ಕೆ ಪುಷ್ಟಿ ನೀಡಿವೆ. “ನಾನು ಯಾವುದೇ ಹುದ್ದೆ ಬಯಸುವುದಿಲ್ಲ’, “ನೀವು ನನ್ನಂಥ ಅಣ್ಣನನ್ನು ಯಾವತ್ತೂ ನೋಡಲಾರಿರಿ, ನಾನು ಹೋದ ಮೇಲೆ ನಿಮಗೆ ಖಂಡಿತಾ ನನ್ನ ನೆನಪಾಗಲಿದೆ’ ಎಂದು ಚೌಹಾಣ್ ಹೇಳಿದ್ದಾರೆ. ಇದು ಅವರ ವಿದಾಯ ಭಾಷಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಲ್ಲದೆ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಬಿಜೆಪಿ ಕೇವಲ “ಕಮಲ’ದ ಚಿಹ್ನೆಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿರುವುದು ಕೂಡ “ಚೌಹಾಣ್‌ರನ್ನು ಮೂಲೆಗುಂಪು ಮಾಡುವ ಯತ್ನ’ ಎಂದು ಹೇಳಲಾಗುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಉದ್ಧವ್ ಕಣಕ್ಕೆ?
ಪ್ರತಿಪಕ್ಷಗಳ ಮೈತ್ರಿಕೂಟದ ಭಾಗವಾಗಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನೆಯ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಷ್ಟ್ರೀಯ ನಾಯಕತ್ವದತ್ತ ಕಣ್ಣಿಟ್ಟಿದ್ದಾರೆಯೇ? ಹೌದು ಎನ್ನುತ್ತಿವೆ ಮೂಲಗಳು. 2024ರ ಲೋಕಸಭೆ ಚುನಾವಣೆಯಲ್ಲಿ ಮುಂಬೈನ ದಕ್ಷಿಣ-ಕೇಂದ್ರ ಲೋಕಸಭಾ ಕ್ಷೇತ್ರದಿಂದ ಅವರು ಕಣಕ್ಕಿಳಿಯಲಿದ್ದಾರೆ ಎಂಬ ಗುಸು ಗುಸು ಕೇಳಿಬರಲಾರಂಭಿಸಿದೆ. ಈಗಾಗಲೇ ಅವರ ಪಕ್ಷವು ಈ ಕ್ಷೇತ್ರದಲ್ಲಿ ಉದ್ಧವ್ ಅವರ ರೇಟಿಂಗ್ ಮತ್ತು ಜನಪ್ರಿಯತೆ ಹೇಗಿದೆ ಎಂಬುದನ್ನು ತಿಳಿಯಲು ಹಲವು ಸಮೀಕ್ಷೆಗಳನ್ನು ನಡೆಸಿದೆಯಂತೆ. ಲೋಕಸಭೆಯ ಮಾಜಿ ಸ್ಪೀಕರ್, ಶಿವಸೇನೆಯ ಹಿರಿಯ ನಾಯಕ ಮನೋಹರ್ ಜೋಷಿ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವಿದು. ಈ ಕ್ಷೇತ್ರದಲ್ಲಿ ದಲಿತ ಮತ್ತು ಮರಾಠಿ ಮತಗಳ ಸಂಖ್ಯೆ ಹೆಚ್ಚಿರುವ ಕಾರಣ, ಉದ್ಧವ್ ಠಾಕ್ರೆಗೆ ಇದು “ವರ’ವಾಗಿ ಪರಿಣಮಿಸಬಹುದು ಎನ್ನುವ ಲೆಕ್ಕಾಚಾರ ಶಿವಸೇನೆಯದ್ದು.