Advertisement

ಥಾಣೆಯಲ್ಲಿ ಶಿವಸೇನೆ-ಬಿಜೆಪಿ ಘರ್ಷಣೆ ಪೊಲೀಸ್‌ ಕ್ರಮ ಕೈಗೊಳ್ಳಬೇಕೆಂದು ಎರಡೂ ಪಕ್ಷಗಳ ಬೇಡಿಕೆ

04:59 PM Mar 15, 2021 | Team Udayavani |

ಥಾಣೆ: ಕೋವಿಡ್ ಹಿನ್ನೆಲೆ ನಗರದಲ್ಲಿ ಜಾರಿಗೊಳಿಸಲಾದ ನಿಯಮಗಳನ್ನು ಉಲ್ಲಂಘಿಸಿ ಜನಸಂದಣೆ ಸೇರಿಸಿದ ಶಿವಸೇನೆ ಕಾರ್ಪೊರೇಟರ್‌ ಮತ್ತು ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಾಯಕರು ಥಾಣೆ ಪೊಲೀಸ್‌ ಆಯುಕ್ತರಿಗೆ ಬಳಿ ಮನವಿ ಮಾಡಿದ್ದಾರೆ. ಇದರೊಂದಿಗೆ ಮನಪಾ ಮೇಯರ್‌ ಅವರ ಆದೇಶದ ಹೊರತಾಗಿಯೂ ಭದ್ರತಾ ಸಿಬಂದಿಗಳು ಜನ ಸಂದಣೆ ನಿಯಂತ್ರಿಸದಿದ್ದಕ್ಕೆ ಈ ಪ್ರಕರಣದಲ್ಲಿ ಭದ್ರತಾ ಸಿಬಂದಿಗಳ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಮನಪಾ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.

Advertisement

ಥಾಣೆ ನಗರದಲ್ಲಿ 23 ಕೋಟಿ ರೂ.ಗಳ ವೆಚ್ಚದಲ್ಲಿ ಮೂರು ಪಾದಚಾರಿ ಸೇತುವೆಗಳನ್ನು ನಿರ್ಮಿಸ ಲಾಗುತ್ತಿದ್ದು, ಇದನ್ನು ಬಿಜೆಪಿ ಥಾಣೆ ಮನಪಾ ಗುಂಪಿನ ನಾಯಕ ಮನೋಹರ್‌ ಡುಂಬಾರೆ ಆಕ್ಷೇಪಿಸಿದ್ದರು. ಮುಂಬರುವ ಚುನಾವಣೆಗೆ ಹಣ ಸಂಗ್ರಹಿಸಲು ಆಡಳಿತಾರೂಢ ಶಿವಸೇನೆ ಹೊಸ ಸೇತುವೆಗಳನ್ನು ನಿರ್ಮಿಸಿದೆ ಎಂದು ಅವರು ಆರೋಪಿಸಿದ್ದರು. ಈ ಹೇಳಿಕೆಯಿಂದ ಆಕ್ರೋಶಗೊಂಡ ಶಿವಸೇನೆ ಕಾರ್ಪೊರೇಟರ್‌, ಕಾರ್ಯಕರ್ತರು ಶುಕ್ರವಾರ ಬಿಜೆಪಿ ಮನಪಾ ಗುಂಪುನಾಯಕನ ಕಚೇರಿಗೆ ಮುತ್ತಿಗೆ ಹಾಕಿದ್ದು ಡುಂಬಾರೆ ಅವರಲ್ಲಿ ಕ್ಷಮೆಯಾಚಿಸುವಂತೆ ಹೇಳಿದ್ದರು.

ಈ ಕುರಿತು ಮಾತನಾಡಿದ ಶಿವಸೇನೆ ನಾಯಕರೊಬ್ಬರು, ಇತ್ತ ಸುಳ್ಳು ಆರೋಪಗಳಿಗೆ ಉತ್ತರ ಕೇಳಲು ಹೋಗಿದ್ದೇವೆ ಅಷ್ಟೆ, ಆಲ್ಲಿ ಶಿವ ಸೈನಿಕರು ಯಾವುದೇ ಜನಸಂದಣೆ ಸೇರಿರಲಿಲ್ಲ ಎಂದಿದ್ದಾರೆ. ಪೊಲೀಸ್‌ ಮತ್ತು ಮನಪಾ ಆಯುಕ್ತರಿಗೆ ದೂರು ನೀಡಲು ಹೋದ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿವಸೇನೆ ಮುಖಂಡರು ಒತ್ತಾಯಿಸಿದ್ದಾರೆ. ಇದರ ಪರಿಣಾಮವಾಗಿ, ಥಾಣೆಯಲ್ಲಿ ಶಿವಸೇನೆ ವಿರುದ್ಧ ಬಿಜೆಪಿ ನಡೆಸಿದ ಹೋರಾಟ ಈಗ ಪೊಲೀಸ್‌ ಠಾಣೆಯ ಮೆಟ್ಟಿಲು ತಲುಪಿದೆ.

ಶಿವಸೇನೆ ಕಾರ್ಪೊರೇಟರ್‌ಗಳು ಹಾಗೂ ಕಾರ್ಯಕತರರು ನನಗೆ ಬೆದರಿಕೆ ಹಾಕಿದ್ದಾರೆ. ಅವರು 8 ದಿನದೊಳಗಾಗಿ ಕ್ಷಮೆಯಾಚಿಸುವಂತೆ ಹೇಳಿದ್ದಾರೆ. ಆದರೆ ಪಾದಚಾರಿ ಸೇತುವೆಗೆ ಸಂಬಂಧಿಸಿದಂತೆ ಮಾಡಿದ ಆರೋಪಗಳ ಬಗ್ಗೆ ನಾನು ಇನ್ನೂ ಅಚಲ. ಇದಕ್ಕಾಗಿ ಎಲ್ಲ ಬಿಜೆಪಿ ಕಾರ್ಪೊರೇಟರ್‌ಗಳು ಮತ್ತು ಪಕ್ಷಗಳು ನಮ್ಮೊಂದಿಗಿವೆ ಎಂದು ಬಿಜೆಪಿ ಥಾಣೆ ಮನಪಾ ಗುಂಪಿನ ನಾಯಕ ಮನೋಹರ್‌ ಡುಂಬಾರೆ ಹೇಳಿದ್ದಾರೆ.

ಸುಳ್ಳು ಆರೋಪಗಳಿಗೆ ಪ್ರತಿಕ್ರಿಯೆ  :

Advertisement

ಈ ಕುರಿತು ಮಾತನಾಡಿದ ಥಾಣೆ ಮನಪಾ ಆಯುಕ್ತ ನರೇಶ್‌ ಮಾಸ್ಕೆ ಅವರು, ಶಿವಸೈನಿಕರು ಬಿಜೆಪಿ ಗುಂಪಿನ ಮುಖಂಡರಿಗೆ ಸುಳ್ಳು ಆರೋಪಗಳಿಗೆ ಪ್ರತಿಕ್ರಿಯೆ ಕೇಳಿದ್ದಾರೆ. ಅಲ್ಲಿ ಜನಸಂದಣಿ ಇರಲಿಲ್ಲ ಎಂದರು. ಪೊಲೀಸ್‌ ಮತ್ತು ಮನಪಾ ಆಯುಕ್ತರನ್ನು ಭೇಟಿ ಮಾಡಲು ಬಿಜೆಪಿ ನಿಯೋಗ ಜಮಾಯಿಸಿತ್ತು. ಆದ್ದರಿಂದ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಥಾಣೆ ಮೇಯರ್‌ ಹೇಳಿದ್ದಾರೆ.

ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ :

ಈ ಪ್ರಕರಣದ ಬಳಿಕ ಬಿಜೆಪಿ ಶಾಸಕ, ಜಿಲ್ಲಾಧ್ಯಕ್ಷ ನಿರಂಜನ್‌ ಢಾವ್ಖರೆ ಮಾತನಾಡಿ, ಶಾಸಕ ಸಂಜಯ್‌ ಕೆಲ್ಕರ್‌ ಅವರ ನೇತೃತ್ವದ ಪದಾಧಿಕಾರಿಗಳ ನಿಯೋಗವು ಶುಕ್ರವಾರ ರಾತ್ರಿ ಥಾಣೆ ಪೊಲೀಸ್‌ ಆಯುಕ್ತ ವಿವೇಕ್‌ ಫನ್ಸಲ್ಕರ್‌ ಅವರನ್ನು ಭೇಟಿಯಾಗಿ, ಕೊರೊನಾ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಗುಂಪು ಸೇರಿದ್ದರಿಂದ ಶಿವಸೇನೆ ಕಾರ್ಪೊರೇಟರ್‌ ಮತ್ತು ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬೇಡಿಕೆ ಇರಿಸಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next