Advertisement

ಸಭಾಪತಿ ಸ್ಥಾನದ ಮೇಲೆ ಬಿಜೆಪಿ ಹಿರಿಯರ ಕಣ್ಣು

11:50 AM Jan 24, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನ ಪರಿಷತ್ತಿನಲ್ಲಿ ಆಡಳಿತ ಪಕ್ಷ ಬಿಜೆಪಿ ಬಹುಮತದ ಹತ್ತಿರವಿದ್ದು, ಸಭಾಪತಿ ಸ್ಥಾನದ ಮೇಲೆ ಹಲವು ಹಿರಿಯ ಸದಸ್ಯರು ಕಣ್ಣಿಟ್ಟುಕಾಯುತ್ತಿದ್ದು, ಪಕ್ಷದ ರಾಜ್ಯ ನಾಯಕರು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಆಕಾಂಕ್ಷಿಗಳ ಬೇಸರಕ್ಕೆ ಕಾರಣವಾಗಿದೆ.

Advertisement

ಹಾಲಿ ವಿಧಾನ ಪರಿಷತ್‌ ಬಲಾಬಲದಲ್ಲಿ ಬಿಜೆಪಿಗೆ ಬಹುಮತಕ್ಕೆ ಒಂದು ಸ್ಥಾನ ಬೇಕಾಗಿದ್ದು, ಅದೂ ಬೆಳಗಾವಿ ಸ್ಥಳೀಯ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಲಖನ್‌ ಜಾರಕಿಹೊಳಿ ಸದ್ಯ ಬಿಜೆಪಿ ಪರವಾಗಿದ್ದು, ಈಗಲೇ ಬಿಜೆಪಿಗೆ ಬಹುಮತವಿದ್ದು, ಮುಂಬರುವ ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನದ ಸಂದರ್ಭದಲ್ಲಿಯೇ ಬಿಜೆಪಿಯ ಸಭಾಪತಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ಈ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನದ ಆಕಾಂಕ್ಷಿಗಳು ಚಾತಕ ಪಕ್ಷಿಗಳಂತೆ ಕುರ್ಚಿ ಮೇಲೆ ಕಣ್ಣಿಟ್ಟುಕೊಂಡು ಕಾಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಲವರ ಕಣ್ಣು: ಸಭಾಪತಿ ಸ್ಥಾನಕ್ಕಾಗಿ ಹಿರಿಯ ಸದಸ್ಯರಾಗಿರುವ ಆಯನೂರು ಮಂಜುನಾಥ, ಶಶಿಲ್‌ ನಮೋಶಿ, ರಘುನಾಥರಾವ್‌ ಮಲ್ಕಾಪುರೆ, ವೈ.ಎ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಪುಟ್ಟಣ್ಣ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಅಲ್ಲದೇ ಸಭಾಪತಿ ಸ್ಥಾನದ ಆಕಾಂಕ್ಷಿಗಳು ತಮ್ಮದೇ ರೀತಿಯಲ್ಲಿ ರಾಜ್ಯ ನಾಯಕರ ಮೂಲಕ ಸಭಾಪತಿ ಸ್ಥಾನಕ್ಕೇರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇವರಲ್ಲಿ ಕೆಲವರು ಸಚಿವ ಸ್ಥಾನಕ್ಕೂ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದ್ದು, ಕೆಲವರು ಸಭಾಪತಿ ಸ್ಥಾನ ದೊರೆಯದಿದ್ದರೆ, ಸರ್ಕಾರದ ಮುಖ್ಯ ಸಚೇತಕ ಅಥವಾ ಉಪ ಸಭಾಪತಿ ಹುದ್ದೆಯಾದರೂ ದೊರೆಯುವ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಹೊರಟ್ಟಿ ನಡೆ ಮೇಲೆ ನಿರ್ಧಾರ: ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ (ವಿಧಾನ ಪರಿಷತ್ತಿಗೆ ಮಾತ್ರ ಸಂಬಂಧಿಸಿದಂತೆ) ಲೆಕ್ಕಾಚಾರದಲ್ಲಿ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಬಸವರಾಜ ಹೊರಟ್ಟಿ ಅವರ ಅವಧಿ 2022 ರ ಜುಲೈ 4ರ ವರೆಗೂ ಇದೆ. ಅವರು ಈ ಬಾರಿ ಜೆಡಿಎಸ್‌ನಿಂದಲೇ ಸ್ಪರ್ಧಿಸುತ್ತಾರಾ ಅಥವಾ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅವರ ನಡೆ ಆಧಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಸಭಾಪತಿ ಸ್ಥಾನದ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆಂದು ತಿಳಿದು ಬಂದಿದೆ.

ಆಕಾಂಕ್ಷಿಗಳ ಲೆಕ್ಕಾಚಾರ: ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಸಂದರ್ಭದಲ್ಲಿ ಜೆಡಿಎಸ್‌ ಸಂಖ್ಯಾ ಬಲದಲ್ಲಿ ಕಡಿಮೆ ಇದ್ದರೂ, ಜೆಡಿಎಸ್‌ಗೆ ಸಭಾಪತಿ ಸ್ಥಾನ ಬಿಟ್ಟು ಕೊಡಲಾಗಿತ್ತು, ಈಗ ಬಿಜೆಪಿಗೆ ಬಹುತೇಕ (ಒಂದು ಸ್ಥಾನ ಬೇಕಿದೆ) ಬಹುಮತ ಇದ್ದರೂ, ಜೆಡಿಎಸ್‌ಗೆ ಸಭಾಪತಿ ಸ್ಥಾನ ಬಿಟ್ಟು ಕೊಡುವುದರಿಂದ ಬಿಜೆಪಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಸಭಾಪತಿ ಸ್ಥಾನದ ಆಕಾಂಕ್ಷಿಗಳು ವ್ಯಕ್ತಪಡಿಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next