Advertisement
ಕೊಡ್ಗಿಯವರ ಆಸಕ್ತಿ ವೈದ್ಯರಾಗಿ ಜನಸೇವೆ ಮಾಡುವುದಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಅದು ಕೈಗೂಡಲಿಲ್ಲ. ಹಾಗಾಗಿ ಕಾನೂನು ಪದವೀಧರರಾದರು. ಬೆಂಗಳೂರಿನಲ್ಲಿ ಕೆಲ ಸಮಯ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸಿ ಅನಂತರ ಊರಿಗೆ ಬಂದು ಕೃಷಿ ಮತ್ತು ಸಮಾಜಸೇವೆಯತ್ತ ಗಮನ ಹರಿಸಿದರು. ಜತೆಗೇ ರಾಜಕೀಯದ ಆಸಕ್ತಿಯೂ ಬೆಳೆಯಿತು.
Related Articles
ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಕೊಡ್ಗಿಯವರು 1960ರಲ್ಲಿ ರಾಜಕೀಯ ಪ್ರವೇಶಿಸಿದರು. ಹಾಲಾಡಿ ಕ್ಷೇತ್ರದಿಂದ ತಾಲೂಕು ಬೋರ್ಡಿನ ಸದಸ್ಯರಾಗಿ ಆಯ್ಕೆಯಾದರು. 1972 ಹಾಗೂ 1978ರಲ್ಲಿ ಎರಡು
ಬಾರಿ ಬೈಂದೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. 2006ರಲ್ಲಿ ಮೂರನೇ ಹಣಕಾಸು ಅಯೋಗದ ಅಧ್ಯಕ್ಷ ರಾಗಿಯೂ 2009ರಲ್ಲಿ ಮೂರನೇ ಹಣಕಾಸು ಅಯೋಗದ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದರು.
Advertisement
ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ಕೊಡ್ಗಿಯವರ ಗ್ರಾಮೀಣ ಅಭಿವೃದ್ಧಿಯ ಚಿಂತನೆ ವಿಶಿಷ್ಟವಾದುದು. ತಮ್ಮ ಚಿಂತನೆಗಳ ಪ್ರಾಯೋಗಿಕ ಅನುಷ್ಠಾನಕ್ಕೆ ಅವರು ಆಯ್ಕೆ ಮಾಡಿಕೊಂಡುದು ಅಮಾಸೆಬೈಲು ಗ್ರಾಮವನ್ನು. ಈ ಉದ್ದೇಶಕ್ಕಾಗಿ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿತು. ಡಾ| ಡಿ. ವೀರೇಂದ್ರ ಹೆಗ್ಗಡೆ ಯವರು ಇದರ ಗೌರವಾಧ್ಯಕ್ಷರು. ಇಡೀ ಗ್ರಾಮವನ್ನು ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸಿ ರಾಷ್ಟ್ರಕ್ಕೆ ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದರು. ಅವರ ಈ ಸಾಧನೆಗಾಗಿ 2019ರಲ್ಲಿ ರಾಷ್ಟ್ರೀಯ ಸೂರ್ಯಮಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಟ್ರಸ್ಟಿನ ಮೂಲಕ ಅಮಾಸೆಬೈಲು ಗ್ರಾಮದ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾದರು. ಗ್ರಾಮೀಣಾಭಿವೃದ್ಧಿಗೊಂದು ದಿಕ್ಸೂಚಿಯನ್ನು ಈ ಮೂಲಕ ತೋರಿಸಿದರು. ಕೊಡ್ಗಿಯವರ ಜ್ಞಾನಗಳೆಲ್ಲವೂ ಅನುಭವಾಧಾರಿತ. ಅದಕ್ಕೆ ಪ್ರಾಯೋಗಿಕತೆಯ ಸ್ಪರ್ಶವಿದೆ. ಎಲ್ಲ ಕ್ಷೇತ್ರಗಳಿಗೆ ಅಗತ್ಯವಾದ ಚಿಂತನೆಗಳಿವೆ. ಹಾಗಾಗಿ ಕೊಡ್ಗಿಯವರು ನಮ್ಮ ನಡುವಿದ್ದ ಅಪೂರ್ವ ವ್ಯಕ್ತಿ ಎನ್ನಬಹುದು. – ಡಾ| ಶ್ರೀಕಾಂತ ರಾವ್, ಸಿದ್ದಾಪುರ