ಅಹ್ಮದಾಬಾದ್: ದಿಢೀರ್ ಬೆಳವಣಿಗೆಯಲ್ಲಿ ವಿಜಯ್ ರೂಪಾಣಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಗುಜರಾತ್ ನ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಭಾರತೀಯ ಜನತಾ ಪಕ್ಷ ಇಬ್ಬರು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ನರೇಂದ್ರ ಸಿಂಗ್ ತೋಮರ್ ಅವರನ್ನು ಭಾನುವಾರ (ಸೆ.12) ಕಳುಹಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಫ್ಘಾನ್ ನೆಲದಲ್ಲಿ ಉಗ್ರ ಚಟುವಟಿಕೆ ಮಾಡುವಂತಿಲ್ಲ: ತಾಲಿಬಾನ್ ಗೆ ಭಾರತ-ಆಸೀಸ್ ಎಚ್ಚರಿಕೆ
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ದಿಢೀರ್ ರಾಜೀನಾಮೆ ನೀಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ ನಂತರ ರೂಪಾಣಿ ಅವರು ಶನಿವಾರ ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿ ಬಿಜೆಪಿ ಹಿರಿಯ ಮುಖಂಡರ ಜೊತೆ ಚರ್ಚೆ ನಡೆಸಿದ್ದರು.
ರೂಪಾಣಿ ರಾಜೀನಾಮೆ ಕುರಿತು ಘೋಷಿಸುವ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರಧಾನ (ಸಂಘಟನಾ) ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಗುಜರಾತ್ ರಾಜ್ಯ ಘಟಕದ ಉಸ್ತುವಾರಿ ಭೂಪೇಂದ್ರ ಯಾದವ್ ಕೂಡಾ ಜತೆಗಿದ್ದರು.
ಭಾನುವಾರ ನಡೆಯಲಿರುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲು 15 ತಿಂಗಳು ಬಾಕಿ ಇರುವಾಗಲೇ ರೂಪಾಣಿ ರಾಜೀನಾಮೆ ನೀಡಿದ್ದಾರೆ.