Advertisement

BJP: ಹಿಂದಿ ಹಾರ್ಟ್‌ಲ್ಯಾಂಡ್‌ ಕೈವಶ- ಬಿಜೆಪಿ ಗುರಿ

12:07 AM Dec 13, 2023 | Pranav MS |

ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಿಗೆ ಬಿಜೆಪಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದೆ ಎನ್ನುವುದು ಗಮನಾರ್ಹ ವಿಚಾರ. ಆಯಾ ರಾಜ್ಯಗಳಲ್ಲಿ ಇರುವ ಜನರ ಸಮುದಾಯಗಳ ಪ್ರಾಬಲ್ಯಗಳನ್ನು ಗುರುತಿಸಿ ಆ ಪಕ್ಷದ ವರಿಷ್ಠರು ಶಾಸಕಾಂಗ ಪಕ್ಷದ ನಾಯಕರನ್ನು
ಆಯ್ಕೆ ಮಾಡಿದ್ದಾರೆ.

Advertisement

ರಾಜಸ್ಥಾನಕ್ಕೆ ಉ.ಪ್ರ. ಪ್ರಭಾವ
ಮರುಭೂಮಿ ರಾಜ್ಯದಲ್ಲಿ ಜಾತಿ ಸಮೀಕರಣ ನೋಡಿದರೆ ಎಸ್‌ಸಿ ಸಮುದಾಯದವರೇ ಹೆಚ್ಚು. ಇದರ ಜತೆಗೆ ರಜಪೂತ ಮತ್ತು ಜಾಟ್‌ ಸಮುದಾ ಯದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಜಸ್ಥಾನಕ್ಕೆ ಹೊಂದಿಕೊಂಡು ಇರುವ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ನಿಯೋಜಿತ ಸಿಎಂ ಭಜನ್‌ಲಾಲ್‌ ಶರ್ಮಾ ಅವರ ಬ್ರಾಹ್ಮಣ ಸಮುದಾಯ ಶೇ.10 ಇದೆ. ಹರಿಯಾಣದಲ್ಲಿ ಶೇ.12 ಮಂದಿ ಇದ್ದಾರೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಬ್ರಾಹ್ಮಣ ಸಮುದಾಯ ತಲಾ ಶೇ.5 ಮಂದಿ ಇದ್ದಾರೆ. ಈ ಅಂಶ ಕೂಡ ಅವರ ಆಯ್ಕೆಗೆ ನೆರವಾಗಿದೆ. ಇತರ ಎರಡು ರಾಜ್ಯಗಳಲ್ಲಿ ಹಿಂದುಳಿದ ವರ್ಗದವರಿಗೆ ಅವಕಾಶ ಕೊಟ್ಟು ಒಂದು ರಾಜ್ಯದಲ್ಲಿ ಮುಂದುವರಿದ ಜನಾಂಗವಾ ಗಿರುವ ಬ್ರಾಹ್ಮಣ ಸಮುದಾಯಕ್ಕೆ ಸಿಎಂ ಸ್ಥಾನ ನೀಡಿದೆ ಬಿಜೆಪಿ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢಗಳಿಂದ 145 ಸಂಸದರು ಆಯ್ಕೆಯಾಗುತ್ತಾರೆ. ಈ ಪೈಕಿ 114 ಸಾಮಾನ್ಯ ವರ್ಗದಿಂದಲೇ ಚುನಾಯಿ ತರಾಗುತ್ತಾರೆ.

ಮಧ್ಯಪ್ರದೇಶದ 24 ಎಸ್‌ಟಿ ಕ್ಷೇತ್ರಗಳಲ್ಲಿ ಬಿಜೆಪಿಗೇ ಗೆಲುವು
ರಾಜ್ಯದ 230 ವಿಧಾನಸಭಾ ಕ್ಷೇತ್ರಗಳ ಪೈಕಿ 47 ಎಸ್‌ಟಿ ಸಮುದಾಯಕ್ಕೆ ಮೀಸಲು. ಆ ಪೈಕಿ ಬಿಜೆಪಿ 24 ಕ್ಷೇತ್ರಗಳಲ್ಲಿ ಗೆದ್ದಿದೆ. ಜತೆಗೆ ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಶೇ.48 ಒಬಿಸಿ ಸಮುದಾಯದವರೇ ಆಗಿದ್ದಾರೆ. ಹೀಗಾಗಿ, ಪಕ್ಷವನ್ನು ಬೆಂಬಲಿಸಿದ ವರ್ಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಅನಿವಾರ್ಯವೇ ಆಗುತ್ತದೆ. ಆ ಸ್ಥಿತಿಯನ್ನು ಬಿಜೆಪಿ ತನ್ನ ಅನುಕೂಲಕ್ಕೆ ಬಳಕೆ ಮಾಡಿಕೊಂಡಿದೆ. ಒಬಿಸಿ ಸಮುದಾಯದ ಮೋಹನ್‌ ಯಾದವ್‌ರನ್ನು ಸಿಎಂ ಮಾಡಿದರೆ, ಬ್ರಾಹ್ಮಣ ಸಮುದಾಯದ ಜಗದೀಶ್‌ ದೇವಾxರನ್ನು ಡಿಸಿಎಂ ಸ್ಥಾನಕ್ಕೆ ಬಿಜೆಪಿ ನಿಯೋಜಿಸಿದೆ. ಮೋಹನ್‌ ಯಾದವ್‌ರನ್ನು ಸಿಎಂ ಮಾಡಿ ಉತ್ತರ ಪ್ರದೇಶ, ಬಿಹಾರದ 120 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನದ್ದನ್ನು ಬಗಲಿಗೆ ಹಾಕುವ ಯೋಚನೆ ಹೊಂದಿದೆ. ಏಕೆಂದರೆ ಬಿಹಾರದಲ್ಲಿ
ಒಬಿಸಿ ಸಮುದಾಯ ಶೇ.14, ಉ.ಪ್ರ.ದಲ್ಲಿ ಶೇ.10 ಮಂದಿ ಇದ್ದಾರೆ.

ಛತ್ತೀಸ್‌ಗಢಕ್ಕೆ ಬುಡಕಟ್ಟು ಬಲ
90 ಕ್ಷೇತ್ರಗಳಿರುವ ಈ ರಾಜ್ಯದಲ್ಲಿ ಒಟ್ಟು ಬುಡಕಟ್ಟು ಸಮುದಾಯದವರು ಬಲವಾಗಿ ಇರುವ 26 ಕ್ಷೇತ್ರಗಳ ಪೈಕಿ 22 ರಲ್ಲಿ ಬಿಜೆಪಿ ಜಯಸಾಧಿಸಿದೆ. ಹೀಗಾಗಿ ವಿಷ್ಣುದೇವ್‌ ಸಾಯಿ ಅವರನ್ನು ಸಿಎಂ ಸ್ಥಾನಕ್ಕೆ ನೇಮಿಸಲಾಗಿದೆ. ಹೀಗಾಗಿಯೇ, ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರದ ಅವಧಿಯಲ್ಲಿ ಬುಡಕಟ್ಟು ಸಮುದಾಯದ ಕೊಡುಗೆಗಳನ್ನು ಪ್ರಮುಖವಾಗಿ ಕೊಂಡಾಡಿ ಮಾತನಾಡಿದ್ದು ಗಮನಾರ್ಹ. “ನಾನು ಸಮುದಾಯದ ಸೇವೆಗಾಗಿಯೇ ಇದ್ದೇನೆ’ ಎಂದು ಪ್ರಧಾನಿಯವರು ಹೇಳಿದ್ದುಂಟು. ಛತ್ತೀಸ್‌ಗಢದ ಸುತ್ತ ಇರುವ 6 ರಾಜ್ಯಗಳ ಪೈಕಿ ಮಧ್ಯಪ್ರದೇಶ, ಝಾರ್ಖಂಡ್‌ನ‌ಲ್ಲಿ ಬುಡಕಟ್ಟು ಸಮುದಾಯದವರು ಕ್ರಮವಾಗಿ ಶೇ.22, ಶೇ.26 ಮಂದಿ ಇದ್ದಾರೆ ಅವರ ಮತಗಳನ್ನು ಲೋಕಸಭೆ ಚುನಾವಣೆಯಲ್ಲಿ ಸೆಳೆಯುವ ಗುರಿಯೂ ವಿಷ್ಣುದೇವ್‌ ಸಾಯಿ ಆಯ್ಕೆಯಲ್ಲಿದೆ.

ಇಂದು ಛತ್ತೀಸ್‌ಗಢ, ಮ.ಪ್ರ.ಸಿಎಂ ಪ್ರಮಾಣ
ಮಧ್ಯಪ್ರದೇಶದ ಸಿಎಂ ಆಗಿ ಆಯ್ಕೆಯಾಗಿ ರುವ ಮೋಹನ್‌ ಯಾದವ್‌ ಅವರಿಗೆ ಬುಧವಾರ ಭೋಪಾಲದಲ್ಲಿ ಮಂಗುಭಾಯ್‌ ಪಟೇಲ್‌ ಪ್ರಮಾಣ ವಚನ ಬೋಧಿ ಸ ಲಿದ್ದಾರೆ. ಬೆಳಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯ ಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ಯ ಪ್ರಮುಖರು ಭಾಗವಹಿ ಸಲಿದ್ದಾರೆ. ಸಂಜೆ 4 ಗಂಟೆಗೆ ರಾಯ್ಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಷ್ಣು ದೇವ್‌ ಸಾಯಿ ಇಬ್ಬರು ಡಿಸಿಎಂಗಳ ಜತೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Advertisement

ಕೊನೆಯ ಸಾಲಿನಲ್ಲಿದ್ದ ಶರ್ಮಾ ಸಿಎಂ ಗಾದಿಗೆ
ರಾಜಸ್ಥಾನದ ಸಿಎಂ ಯಾರಾಗುತ್ತಾರೆ ಎನ್ನುವುದು ಬೆರಳೆಣಿಕೆಯ ಮಂದಿಗೆ ಮಾತ್ರ ಗೊತ್ತಿತ್ತು ಎನ್ನುತ್ತಿವೆ ಬಿಜೆಪಿ ಮೂಲಗಳು. ಕೊನೆಯ ಸಾಲಿನಲ್ಲಿ ಇದ್ದ ರಾಜಸ್ಥಾನದ ಸಂಗನೇರ್‌ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ಭಜನ್‌ಲಾಲ್‌ ಶರ್ಮಾರನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಹೊಸ ದಿ ಲ್ಲಿಯಿಂದ ಬಂದಿದ್ದ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ವೀಕ್ಷಕರು ಪ್ರಕಟಿಸಿದರು. ಆರ್‌ಎಸ್‌ಎಸ್‌ ನಾಯಕರಿಗೆ ಅತ್ಯಂತ ಆಪ್ತರಾಗಿರುವ ಅವರು, 1992ರಲ್ಲಿ ರಾಮ ಮಂದಿರ ನಿರ್ಮಾಣ ಆಂದೋಲನದಲ್ಲಿ ಭಾಗಿಯಾಗಿದ್ದರು. 27ನೇ ವಯಸ್ಸಿಗೇ ತಮ್ಮ ಸ್ವಂತ ಗ್ರಾಮದ ಅಧ್ಯಕ್ಷರಾಗಿ 2 ಬಾರಿ ಆಯ್ಕೆಯಾಗಿದ್ದಾರೆ. ನಿಯೋಜಿತ ಸಿಎಂ ಸ್ನಾತಕೋತ್ತರ ಪದವೀಧರ.

Advertisement

Udayavani is now on Telegram. Click here to join our channel and stay updated with the latest news.

Next