ಮೈಸೂರು: ಬಿಜೆಪಿ ಮತ್ತು ಎಸ್‌ಡಿಪಿಐ ನಡುವಿನ ಒಳ ಒಪ್ಪಂದದ ಕುರಿತು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಯಾಗಿ ತನಿಖಾ ವರದಿಯನ್ನು ನಾಡಿನ ಜನರ ಮುಂದಿಡಬೇಕೆಂದು ವವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪ್ರಮೋದ್ ಮುತಾಲಿಕ್ ಅವರ ಹೇಳಿಕೆಗಳ ಕುರಿತಾಗಿಯೂ ತನಿಖೆ ನಡೆಯಲಿ ಎಂದು ಸಿದ್ದರಾಮಯ್ಯ ಸೋಮವಾರ ಇಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ನಮ್ಮ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪಿಎಫ್ಐ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಆರೋಪದ ಬಗ್ಗೆ ನಾನೇ ನಾಲ್ಕು ಬಾರಿ ಸರಕಾರಕ್ಕೆ ಪತ್ರ ಬರೆದು, ನಮ್ಮ ಅವಧಿಯಲ್ಲಿ ಯಾವ ಪಿಎಫ್ಐ ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಗ್ಗೆ ಬಿಜೆಪಿ ಸರಕಾರದಿಂದ ಉತ್ತರ ಕೇಳಿದ್ದೆ. ಬಿಜೆಪಿ ಸರಕಾರವೇ ಕೊಟ್ಟಿರುವ ಉತ್ತರದಲ್ಲಿ ಎಲ್ಲೂ ಪಿಎಫ್ಐ ಮೇಲಿನ ಪ್ರಕರಣಗಳನ್ನು ಹಿಂಪಡೆದಿರುವ ಉಲ್ಲೇಖಗಳೇ ಇಲ್ಲ. ಸಚಿವ ಆರ್. ಅಶೋಕ್ ಇವುಗಳ ಬಗ್ಗೆ ಏನನ್ನೂ ಪ್ರಸ್ತಾವ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವ ಅಶೋಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಆರೋಪಿಗಳು ಪಿಎಫ್ಐ ಕಾರ್ಯಕರ್ತರಾಗಿದ್ದರು ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರ ನನಗೆ ಕೊಟ್ಟಿರುವ ಉತ್ತರದಲ್ಲಿ ಇವುಗಳ ಪ್ರಸ್ತಾವವೇ ಇಲ್ಲ ಎಂದಿದ್ದಾರೆ ಸಿದ್ದರಾಮಯ್ಯ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಿಎಫ್ಐ ಕಾಂಗ್ರೆಸ್ಸಿನ ವೋಟು ಬ್ಯಾಂಕನ್ನು ಛಿದ್ರ ಮಾಡುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸತ್ಯ ತಾನೇ? ಕಾಂಗ್ರೆಸ್ ವೋಟು ಬ್ಯಾಂಕನ್ನು ಛಿದ್ರ ಮಾಡುವವರಿಗೆ ಬಿಜೆಪಿ ಬೆಂಬಲಿಸುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಸಂಘ ಪರಿವಾರದ ಅಂಗಳದಲ್ಲೇ ಇರುವ ಪ್ರಮೋದ್ ಮುತಾಲಿಕ್ ಅವರೇ ಕೆಲವು ದಿನಗಳ ಹಿಂದಷ್ಟೇ, ಪಿಎಫ್ಐ ಮತ್ತು ಎಸ್‌ಡಿಪಿಐ ಎರಡಕ್ಕೂ ಬಿಜೆಪಿಯೇ ಪೋಷಕ. ಬಿಜೆಪಿಯಿಂದಲೇ ಈ ಎರಡೂ ಬೆಳೆದಿವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಇದುವರೆಗೂ ಬಿಜೆಪಿಯವರಾಗಲೀ, ಸಂಘ ಪರಿವಾರವಾಗಲೀ ಅಲ್ಲಗಳೆದಿಲ್ಲ. ಹಾಗಾದರೆ ಪ್ರಮೋದ್ ಮುತಾಲಿಕ್ ಅವರ ಮಾತು ನಿಜ ತಾನೆ ಎಂದು ಪ್ರಶ್ನಿಸಿದ್ದೆ. ಈ ಪ್ರಶ್ನೆಗೂ ಅಶೋಕ್ ಉತ್ತರಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.