Advertisement

ಅನ್ಸಾರಿ ವಿರುದ್ಧ ಬಿಜೆಪಿ,ಆರ್‌ಎಸ್‌ಎಸ್‌ ಆಕ್ರೋಶ

08:06 AM Jan 31, 2018 | Team Udayavani |

ಗಂಗಾವತಿ: ಶ್ರೀರಾಮ ಭಕ್ತರು ಮತ್ತು ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಶಾಸಕ ಇಕ್ಬಾಲ್‌ ಅನ್ಸಾರಿ ವಿರುದ್ಧ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಮಂಗಳವಾರ ನಗರದ ಚನ್ನಬಸವಸ್ವಾಮಿ ವೃತ್ತದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಅನ್ಸಾರಿ ಪ್ರತಿಕೃತಿ ದಹಿಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ಗಂಟೆಗೂ ಅಧಿಕ ಕಾಲ ರಾಯಚೂರು ಕೊಪ್ಪಳ ರಸ್ತೆ ಬಂದ್‌ ಮಾಡಲಾಗಿತ್ತು.

Advertisement

ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದರು. ಶಾಸಕ ಅನ್ಸಾರಿ ವಿರುದ್ಧ ಚನ್ನಬಸವಸ್ವಾಮಿ ವೃತ್ತದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರೆ ಅತ್ತ ಸಂಘ ಪರಿವಾರದ ಯುವ ಕಾರ್ಯಕರ್ತರು ಅನ್ಸಾರಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಅನ್ಸಾರಿ ಬೆಂಬಲಿಗರು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪರಸ್ಪರ ಧಿಕ್ಕಾರ ಮತ್ತು ಜೈ ಶ್ರೀರಾಮ್‌, ಜೈ ಅನ್ಸಾರಿ ಘೋಷಣೆ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಪೊಲೀಸರು ಸಂಘ ಪರಿವಾರದ ಕಾರ್ಯಕರ್ತರನ್ನು ಬಂಧಿಸಿ ಠಾಣೆಗೆ ಕರೆತಂದರು. ಈ ಘಟನೆಯಲ್ಲಿ ಕಿಡಿಗೇಡಿಗಳು ಅನ್ಸಾರಿ ಕಾರು, ಚಾಲಕ ಜಬ್ಟಾರ್‌ ಖಾನ್‌ಗೆ ಕಲ್ಲೆಸೆದಿದ್ದರಿಂದ ಬಲಗೈಗೆ ತೀವ್ರ ಗಾಯವಾಗಿದೆ.

ಅನ್ಸಾರಿ ಮನೆಗೆ ಮುತ್ತಿಗೆ ಕುರಿತು ಬಿಜೆಪಿ ಹಾಗೂ ಸಂಘ ಪರಿವಾರದ 28 ಜನರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಜಬ್ಟಾರ ಖಾನ್‌ರಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next