ಕುಂದಗೋಳ: ಕಳೆದ ಒಂದು ವಾರದಿಂದ ತೀವ್ರ ಕುತೂಹಲ ಕೆರಳಿಸಿದ್ದ ಪಟ್ಟಣ ಪಂಚಾಯತಿ ಅಧಿ ಕಾರ ಯಾರು ಹಿಡಿಯುತ್ತಾರೆಂಬ ಗೊಂದಲಕ್ಕೆ ಶನಿವಾರ ನಡೆದ ಚುನಾವಣೆ ತೆರೆ ಎಳೆದಿದೆ. ಬಿಜೆಪಿ ಮತ್ತೆ ತನ್ನ ಸ್ಥಾನವನ್ನು ಉಳಿಸಿಕೊಂಡು ಪಕ್ಷಾಂತ ರಿಗಳಿಗೆ ಪೆಟ್ಟು ಕೊಡಲು ಸಜ್ಜಾಗಿದೆ.
ಬೆಳಗ್ಗೆ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸುನೀತಾ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹನಮವ್ವ ಕೋರಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ (ಗಣೇಶ) ಕೋಕಾಟೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತಪ್ಪ ರಣತೂರ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 2:30 ಗಂಟೆಗೆ ಸದಸ್ಯರು ಕೈ ಎತ್ತುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಿದರು. ಕಾಂಗ್ರೆಸ್ ಉಮೇದುವಾರರು ತಮ್ಮ ಪಕ್ಷದ 9 ಸದಸ್ಯರು ಮತ್ತು ಶಾಸಕರ 1 ಮತ ಸೇರಿ 10 ಮತ ಪಡೆದರು.
ಬಿಜೆಪಿ ಉಮೇದುವಾರರು ಪಕ್ಷದ 9 ಸದಸ್ಯರು, ಪಕ್ಷೇತರ 1 ಹಾಗೂ ಸಂಸದ ಪ್ರಹ್ಲಾದ ಜೋಶಿ ಮತ ಸೇರಿ 11 ಸ್ಥಾನ ಪಡೆದು ಅಧಿಕಾರಿದ ಚುಕ್ಕಾಣಿ ಹಿಡಿದರು. ಅಧ್ಯಕ್ಷರಾಗಿ ಪ್ರಕಾಶ(ಗಣೇಶ) ಕೋಕಾಟೆ, ಉಪಾಧ್ಯಕ್ಷರಾಗಿ ಹನುಮಂತಪ್ಪ ರಣತೂರ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಅಶೋಕ ಶಿಗ್ಗಾಂವ ಕಾರ್ಯನಿರ್ವಹಿಸಿದರು. ನಂತರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಇಂದಿನ ಈ ಗೆಲುವು ಎಲ್ಲ ಕಾರ್ಯಕರ್ತರದ್ದು. ಪಕ್ಷವಿರೋಧಿ ಕೆಲಸ ಮಾಡಿದ ಮೂವರು ಸದಸ್ಯರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧ್ಯಕ್ಷರಿಗೆ ಸೂಚಿಸಿದ್ದೇನೆ. ಮತ್ತೆ ಈ ಮೂರು ವಾರ್ಡ್‌ಗಳಲ್ಲಿ ಮರು ಚುನಾವಣೆ ನಡೆಯುತ್ತದೆ. ಅದಕ್ಕೆ ಸಿದ್ಧರಾಗಿ ಎಂದು ಕರೆ ನಿಡಿದರು.
ನೂತನ ಅಧ್ಯಕ್ಷ ಪ್ರಕಾಶ(ಗಣೇಶ) ಕೋಕಾಟೆ ಮಾತನಾಡಿ, ಪಕ್ಷ ನೀಡಿದ ಜವಾಬ್ದಾರಿಯಿಂದ ಖುಷಿಯಾಗಿದೆ. ಎಲ್ಲ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಹಿರಿಯರ ಸಲಹೆ-ಸೂಚನೆ ಪಡೆದು ಪಟ್ಟಣದ ಅಭಿವೃದ್ಧಿ ಕೈಗೊಳ್ಳುತ್ತೇನೆ ಎಂದರು. ಬಿಜೆಪಿ ಕಾರ್ಯಕರ್ತರು ಪಟಾಕ್ಷಿ ಸಿಡಿಸಿ ಸಂಭ್ರಮಿಸಿದರು. ಮುಂದಾಳತ್ವ ವಹಿಸಿದ್ದ ಮುಖಂಡ ಎಂ.ಆರ್.ಪಾಟೀಲ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಸಂಭ್ರಮಿಸಿದರು. ಹಿರೇಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಬಸವರಾಜ ಕುಂದಗೋಳಮಠ, ರವಿಗೌಡ ಪಾಟೀಲ, ಪೃಥ್ವಿ ಕಾಳೆ, ಮಾಲತೇಶ ಶ್ಯಾಗೋಟಿ, ಈಶ್ವರಪ್ಪ ಗಂಗಾಯಿ, ಬಸವರಾಜ ಕೊಪ್ಪದ, ಬಿ.ಟಿ. ಗಂಗಾಯಿ, ದಾನಪ್ಪ ಗಂಗಾಯಿ, ಭರಮಗೌಡ್ರ ದ್ಯಾವನಗೌಡ್ರ, ಯಲ್ಲಪ್ಪಗೌಡ ಪಾಟೀಲ, ನಾಗರಾಜ ಸುಭರಗಟ್ಟಿ, ಪ್ರಕಾಶಗೌಡ ಪಾಟೀಲ ಮೊದಲಾದವರಿದ್ದರು.