ಮೈಸೂರು: ಕೆ.ಆರ್. ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಕಾರಣ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಆಕ್ರೋಶಗೊಂಡಿದ್ದು ಸೋಮವಾರ ರಾತ್ರಿ ಮನೆಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಮತ್ತು ಅಭ್ಯರ್ಥಿ ಶ್ರೀವತ್ಸ ಅವರ ಭೇಟಿ ನಿರಾಕರಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಟಿಕೆಟ್ ಕೈ ತಪ್ಪಿದ ಬಳಿಕ ಮನೆಯ ಒಂದು ಹಾಲ್ ನಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದ ರಾಮದಾಸ್ ಅವರು ಇಬ್ಬರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ. ಮನೆಯ ಮತ್ತೊಂದು ಬಾಗಿಲಿನಿಂದ ಹೊರನಡೆದಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಮದಾಸ್, 30 ವರ್ಷಗಳಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಈಗ ಆ ಮನೆಯಲ್ಲಿ ಇರಬೇಕೋ ಬೇಡವೋ ಎಂಬುದುನ್ನು ನಾಳೆ ಸಂಜೆ ತಿಳಿಸುತ್ತೇನೆ.ಯಾವ ನಿರ್ಧಾರ ಮಾಡಬೇಕು ಅಂತ ನಾಳೆ ಹೇಳುತ್ತೇನೆ.ನಾನು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದೇವು. ಟಿಕೆಟ್ ತಪ್ಪಿರುವ ಕಾರಣ ರಾಮದಾಸ್ ಅವರಿಗೆ ನೋವಾಗಿದೆ.30 ವರ್ಷಗಳಿಂದ ಇದ್ದ ಅವಕಾಶ ಕೈ ತಪ್ಪಿದ ಕಾರಣ ರಾಮದಾಸ್ ಅವರಿಗೆ ಬೇಸರ ಆಗಿರೋದು ಸಹಜ. ನಾಳೆ ನಿಮ್ಮನ್ನು ಭೇಟಿ ಮಾಡುತ್ತೇನೆ. ಪಕ್ಷದ ಜೊತೆ ಇರುತ್ತೇನೆ ಎಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.
ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಮಾತನಾಡಿ, ಪಕ್ಷವನ್ನು ತಾಯಿ ಎಂದು ಭಾವಿಸಿರುವವರು ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. 30 ವರ್ಷದಿಂದ ಜತೆ ಇದ್ದೇವು. ಅವರು ನನ್ನ ವಿರುದ್ದ ಕೆಲಸ ಮಾಡಲ್ಲ.ಆ ವಿಶ್ವಾಸ ನನಗೆ ಇದೆ ಎಂದರು.