ಬೆಂಗಳೂರು: ಗಾಂಧಿಯ ಮಗ ಕುಡುಕನಾದ, ಎಸ್.ಆರ್.ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲಾಗದು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಸಿದ್ದರಾಮಯ್ಯ ಅವರೇ ನೀವು ಯಾವ ಗಾಂಧಿಯ ಬಗ್ಗೆ ಹೇಳಿದ್ದು? ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ ಅಥವಾ ಸೋನಿಯಾ ಗಾಂಧಿಯ ಪುತ್ರನ ಬಗ್ಗೆಯೋ ಎಂದು ಬಿಜೆಪಿ ಟ್ವೀಟ್ ಮಾಡಿದರು.
ರಾಜ್ಯ ಬಿಜೆಪಿ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಲಾಗಿದೆ.
ಇದನ್ನೂ ಓದಿ:ಬೊಮ್ಮಾಯಿ ರಾಜ್ಯ‘ಭಾರ’..! ತಂದೆಗಾದ ಸ್ಥಿತಿ ಮಗನಿಗೂ ಆಗಬಹುದೇ..?
ಪ್ರಾಮಾಣಿಕವಾಗಿ ಹೇಳಿ ಸಿದ್ದರಾಮಯ್ಯನವರೇ, ನಿಮ್ಮ ಪುತ್ರ, ಡಾ. ಯತೀಂದ್ರ ಅವರಿಗೆ ನಿಮ್ಮ ಗುಣ ಎಷ್ಟು ಬಂದಿದೆ? ಸಾಮಾನ್ಯವಾಗಿ ತಂದೆಯಿಂದ ಮಗನಿಗೆ ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ. ಸಂಸ್ಕಾರ, ಗುಣ, ಸಾಮರ್ಥ್ಯ ಅವರವರ ಗಳಿಕೆ ಎಂಬುದನ್ನು ಅರ್ಥೈಸಿಕೊಳ್ಳಿ ಎಂದಿದೆ.
ಸಿದ್ದರಾಮಯ್ಯನವರೇ, ನಿಮ್ಮ ಹಿರಿಯ ಪುತ್ರ ರಾಕೇಶ್ ವಿಪರೀತ ಕುಡಿಯುವ ಅಭ್ಯಾಸ ಹೊಂದಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕುಡಿದ ಮತ್ತಿನಲ್ಲಿ ಹಿರಿಯರ ಮೇಲೂ ದೌರ್ಜನ್ಯ ಎಸಗಿದ ಬಗ್ಗೆ ಸುದ್ದಿಯಾಗಿತ್ತು. ಇದೆಲ್ಲ ಅಪ್ಪನ ಗುಣ ಎಂದು ಸಾಮಾನ್ಯೀಕರಿಸಲು ಸಾಧ್ಯವೇ ಎಂದು ಬಿಜೆಪಿ ತಿರುಗೇಟು ನೀಡಿದೆ.