ಧಾರವಾಡ: ಹೆಬ್ಬಳ್ಳಿ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣವನ್ನು ರಾಜ್ಯ ಪೊಲೀಸರಿಂದ ಮರು ತನಿಖೆ ಮತ್ತು ಸಿಬಿಐ ತನಿಖೆಗೂ ಒಳಪಡಿಸುವಂತೆ ಆಗ್ರಹಿಸಿ ಯೋಗೀಶಗೌಡ ಪತ್ನಿ ಮಲ್ಲಮ್ಮ ಹಾಗೂ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಗಾಣಿಗೇರ ನೇತೃತ್ವದಲ್ಲಿ ನಗರದ ಡಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಜಿಪಂ ಮಾಜಿ ಸದಸ್ಯರಾದ ಅಮೃತ ದೇಸಾಯಿ, ತವನಪ್ಪ ಅಷ್ಟಗಿ ಅವರೊಂದಿಗೆ ಡಿಸಿ ಕಚೇರಿಗೆ ಆಗಮಿಸಿದ ಮಲ್ಲಮ್ಮ, ಪತಿ ಯೋಗೀಶಗೌಡರ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಳಪಡಿಸುವುದರ ಜೊತೆಗೆ ನಮ್ಮ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮಲ್ಲಮ್ಮ ಮನವಿ ಸಲ್ಲಿಸಿದರೆ,ಬಿಜೆಪಿ ಘಟಕದಿಂದ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪತಿಯ ಹತ್ಯೆಯ ಆರೋಪದಲ್ಲಿ ಈಗ ಬಂಧನಕ್ಕೆ ಒಳಗಾಗಿರುವ ಆರೋಪಿಗಳೆಲ್ಲ ಸಚಿವ ವಿನಯ ಕುಲಕರ್ಣಿ ಅವರ ಪರಮಾಪ್ತರು. ಇದಲ್ಲದೇ ಹತ್ಯೆಗೂ ಮುನ್ನ ನನ್ನ ಪತಿಗೆ ಸಚಿವರ ಸಹೋದರ ವಿಜಯ ಕುಲಕರ್ಣಿ ಹೆಸರಿನಲ್ಲಿ ಜೀವ ಬೆದರಿಕೆ ಪತ್ರ ಬಂದಿದ್ದವು.
ರಾಜಕೀಯ ವಿಷಯವಾಗಿ ಸಚಿವರೊಂದಿಗೆ ಸಾಕಷ್ಟು ಜಗಳಗಳಾಗಿವೆ. ಹೀಗಾಗಿ ಈ ಹತ್ಯೆಯ ಹಿಂದೆ ಇನ್ನೂ ಅನೇಕ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಆದರೆ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಲೋಪ-ದೋಷಗಳಿದ್ದು, ಈಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಹತ್ಯೆಯ ಹಿಂದಿರುವ ಪ್ರಭಾವಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಬಂಧನದಲ್ಲಿರುವ ಹತ್ಯೆಯ ಆರೋಪಿಗಳು ಸಚಿವ ವಿನಯ ಕುಲಕರ್ಣಿ ಆಪ್ತರು ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಹೌದು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮರುತನಿಖೆಗೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಮಲ್ಲಮ್ಮ ಗೌಡರ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಬಿಜೆಪಿ ಮುಖಂಡರಾದ ವೀರೇಶ ಅಂಚಟಗೇರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಗೋವಿನಕೊಪ್ಪ ಗ್ರಾಮಸ್ಥರು ಇದ್ದರು.