Advertisement
ಟಿಪ್ಪು ಜಯಂತಿ ವಿರೋಧಿಸಿ ರಾಜ್ಯ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕೃತಿ ಹಿಡಿದು ರಾಜ್ಯ ಸರ್ಕಾರ ಹಾಗೂ ಟಿಪ್ಪು ಸುಲ್ತಾನ್ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಲು ಬಿಜೆಪಿ ಕಾರ್ಯಕರ್ತರು ಮುಂದಾದರು.
Related Articles
Advertisement
ಕುಂಟ-ಕುರುಡು ಸರ್ಕಾರ: ಇದಕ್ಕೂ ಮೊದಲು ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಿ.ಆರ್.ಪ್ರೇಮ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕುಂಟ ಮತ್ತು ಕುರುಡರ ಸರ್ಕಾರ. ಎರಡೂ ಪಕ್ಷಗಳಲ್ಲಿ ಹೊಂದಾಣಿಕೆಯೇ ಇಲ್ಲ. ಟಿಪ್ಪು ಜಯಂತಿಯನ್ನು ವಿರೋಧಿಸುವ ಒಂದು ಗುಂಪು ಸರ್ಕಾರದಲ್ಲಿದೆ ಎಂದರು.
ಸರ್ಕಾರದಲ್ಲಿ ಒಮ್ಮತವಿಲ್ಲ ಎಂಬುದನ್ನು ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆಯೇ ತಿಳಿಸುತ್ತದೆ. ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರೇ ಇಲ್ಲ. ಬಹುಜನರ ವಿರೋಧದ ನಡುವೆಯೂ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಇದೊಂದು ಓಟ್ ಬ್ಯಾಂಕ್ ರಾಜಕಾರಣ ಎಂದು ದೂರಿದರು.
ಜಿಲ್ಲಾ ಪಂಚಾಯತ್ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಕೊಡವರು, ಕ್ರಿಶ್ಚಿಯನ್ನರು, ಹಿಂದೂಗಳನ್ನು ಕೊಂದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಮುಂದಾಗಿರುವುದು ಅತ್ಯಂತ ಕೆಟ್ಟ ನಿರ್ಧಾರ. ಯಾರೂ ಸಹ ಟಿಪ್ಪು ಜಯಂತಿ ಆಚರಿಸುವಂತೆ ಕೇಳಿಕೊಂಡಿರಲಿಲ್ಲ. ಕೇವಲ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಉದ್ದೇಶದಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ ಎಂದರು.ಟಿಪ್ಪು ಜಯಂತಿ ಕೈಬಿಟ್ಟು ದೇಶಕ್ಕಾಗಿ ತಮ್ಮ ಎಲ್ಲವನ್ನೂ ತ್ಯಾಗ ಮಾಡಿದ ಎ.ಪಿ.ಜೆ. ಅಬ್ದುಲ್ ಕಲಾಂ, ಸಂತ ಶಿಶುನಾಳ ಷರೀಫರ ಜಯಂತಿ ಆಚರಿಸಲಿ. ಬಿಜೆಪಿಯ ಎಲ್ಲ ಕಾರ್ಯಕರ್ತರೂ ಆ ಕಾರ್ಯಕ್ರಮದಲ್ಲಿ ಬಾಗಿಯಾಗುತ್ತೇವೆ. ಅದನ್ನು ಬಿಟ್ಟು ಟಿಪ್ಪು ಜಯಂತಿ ಆಚರಿಸಲು ಮುಂದಾಗಿರೋದು ಖಂಡನೀಯ ಎಂದು ಹೇಳಿದರು. ನಗರಸಭಾ ಉಪಾಧ್ಯಕ್ಷ ಸುಧೀರ್, ನಗರ ಬಿಜೆಪಿ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿದರು. ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್, ತಾಪಂ ಅಧ್ಯಕ್ಷ ನೆಟ್ಟೇಕೆರೆ ಜಯಣ್ಣ, ಜಿ.ಪಂ. ಸದಸ್ಯ ಹಿರಗಯ್ಯ, ಮುಖಂಡರಾದ ಮಧುಕುಮಾರ್ ರಾಜ್ ಅರಸ್, ಕೆ.ಎಸ್. ಪುಷ್ಪರಾಜ್, ವೀಣಾಶೆಟ್ಟಿ ಇತರರು ಪಾಲ್ಗೊಂಡಿದ್ದರು.