Advertisement

ಸಚಿವ ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ 

11:28 AM Sep 17, 2017 | |

ಮೈಸೂರು: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್‌ ಸಿಬಿಐ ತನಿಖೆಗೆವಹಿಸುವಂತೆ ತಿಳಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ಆರೋಪ ಹೊತ್ತಿರುವ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಗರ ಮತ್ತು ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯಸರ್ಕಾರ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಳಿಕ ಪ್ರಕರಣದ ಆರೋಪಿಯಾಗಿದ್ದ ಸಚಿವ ಕೆ.ಜೆ.ಜಾರ್ಜ್‌ರ ರಾಜೀನಾಮೆ ಪಡೆದು, ಕಣ್ಣೊರೆಸುವ ಕೆಲಸ ಮಾಡಿತ್ತು.  ಇದೀಗ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಪ್ರಿಂಕೋರ್ಟ್‌ ನಿರ್ದೇಶಿಸುವ ಮೂಲಕ ಪ್ರಕರಣವನ್ನು ಎತ್ತಿ ಹಿಡಿದಿದ್ದು, ಈ ಹಿನ್ನೆಲೆಯಲ್ಲಿ ಜಾರ್ಜ್‌ ಅವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.

ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ನಗರಪಾಲಿಕೆ ಸದಸ್ಯರಾದ ಮ.ವಿ.ರಾಮಪ್ರಸಾದ್‌, ಶ್ನೆàಕ್‌ ಶ್ಯಾಮ್‌, ಜಿಪಂ ಮಾಜಿ ಅಧ್ಯಕ್ಷ ಕಾ.ಪು.ಸಿದ್ಧವೀರಪ್ಪ, ಮುಡಾ ಮಾಜಿ ಅಧ್ಯಕ್ಷ ಎಲ್‌.ನಾಗೇಂದ್ರ, ಬಿ.ಪಿ.ಮಂಜುನಾಥ್‌, ಫ‌ಣೀಶ್‌, ಸತೀಶ್‌, ರಾಜೇಶ್‌ ಮತ್ತಿತರರಿದ್ದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತ್ಯೇಕ ಪ್ರತಿಭಟನೆ
ಮೈಸೂರು:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕ್ಷತ್ರಿಯ ಮಹಾಸಭಾ, ಅರಮನೆ ಉಳಿಸಿ ಹೋರಾಟ ಸಮಿತಿ ಹಾಗೂ ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳು ಶನಿವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಬಗ್ಗೆ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಕ್ಷಮೆಯಾಚಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತೀಯ ಕ್ಷತ್ರಿಯ ಮಹಾಸಭಾ ಹಾಗೂ ಅರಮನೆ ಉಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

Advertisement

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ನಗರದ ಗನ್‌ಹೌಸ್‌ ವೃತ್ತದಲ್ಲಿ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪ್ರತಿಮೆ ಸ್ಥಾಪಿಸಬೇಕು, ಮೈಸೂರು ರಾಜವಂಶಸ್ಥರ ಸ್ವತ್ತಿನ ವಿರುದ್ಧ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಹೂಡಿರುವ ಎಲ್ಲಾ ದಾವೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಪಾಲಿಕೆ ಸದಸ್ಯರ ನಿಯೋಗದೊಂದಿಗೆ ಮಾತನಾಡುವ ಸಂದರ್ಭ ಮೈಸೂರು ಅರಸರು ಜನರ ದುಡ್ಡಿನಲ್ಲಿ ಅರಮನೆ, ರಸ್ತೆ ಮಾಡಿದ್ದಾರೆ ಎಂದು ಹೇಳಿರುವುದು ಖಂಡನೀಯ. ಅಲ್ಲದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪ್ರತಿಮೆ ನಿರ್ಮಿಸಬೇಕಿದ್ದು, ಇಲ್ಲವಾದಲ್ಲಿ ಮುಂದೆ ಉಗ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಅರಮನೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ನಂದೀಶ್‌ ಜಿ.ಅರಸ್‌, ಸಂಚಾಲಕರಾದ ಟಿ.ಕೆ.ಸುಬ್ರಮಣ್ಯರಾಜೇ ಅರಸ್‌, ಬೋಗಾದಿ ಸಿದ್ದೇಗೌಡ, ಎಂ.ರಾಮೇಗೌಡ, ಮಹೇಂದ್ರಪ್ಪ, ರಾಜಣ್ಣ, ಕೆ.ಬಸವರಾಜೇ ಅರಸ್‌, ಹೇಮಾ, ಗಣೇಶ್‌ ಪ್ರಭು ಇದ್ದರು.

ಕರಾಮುವಿಗೆ ಮಾನ್ಯತೆ ನೀಡಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಮುಕ್ತ ವಿವಿ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮುಕ್ತ ವಿವಿ ಮಾನ್ಯತೆ ರದ್ದುಗೊಳಿಸಿರುವ ಪರಿಣಾಮ ಮುಕ್ತ ವಿವಿಯಲ್ಲಿ ವಿವಿಧ ವಿಷಯಗಳಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ.

ಇದರಿಂದಾಗಿ ವಿದ್ಯಾರ್ಥಿಗಳು ಮುಂದೆ ವ್ಯಾಸಂಗ ಮಾಡಲು ಸಾಧ್ಯವಾಗದ ಹಾಗೂ ಉದ್ಯೋಗಗಳನ್ನು ಪಡೆಯಲಾಗದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಮುಕ್ತ ವಿವಿಗೆ ಯುಜಿಸಿ ಮಾನ್ಯತೆ ನೀಡಬೇಕಿದ್ದು, ಆ ಮೂಲಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಪದವಿ ನೀಡಿ, ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next