Advertisement

ಪಿಎಫ್ಐ, ಕೆಎಫ್ಡಿ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

11:29 AM Aug 18, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಗೆ ಕಾರಣವಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಮತ್ತು ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ (ಕೆಎಫ್ಡಿ) ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಯುವ ಮೋರ್ಚಾ ಕಾರ್ಯಕರ್ತರು, ಈ ಸಂಘಟನೆಗಳನ್ನು ನಿಷೇಧಿಸುವುದರ ಜತೆಗೆ ಇಂತಹ ಸಂಘಟನೆಗಳಿಗೆ ಕುಮ್ಮಕ್ಕು ನೀಡುವ ಸಚಿವ ರಮಾನಾಥ ರೈ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು.

ಸಂಘರ್ಷ ಸೃಷ್ಟಿಸುವ ಪ್ರಯತ್ನ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಹತ್ಯೆಯಲ್ಲಿ ಪಿಎಫ್ಐ ಕೈವಾಡ ಇರುವುದು ಸಾಬೀತಾಗಿದೆ. ಅದೇ ರೀತಿ ಇತ್ತೀಚೆಗೆ ನಡೆದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಲ್ಲಿ ಪಿಎಫ್ಐ ಜತೆಗೆ ಕೆಎಫ್ಡಿ ಸಂಘಟನೆ ಶಾಮೀಲಾಗಿರುವುದು ಗೊತ್ತಾಗಿದೆ. ಇವು ಇಸ್ಲಾಂ ಮೂಲಭೂತವಾದಿ ಸಂಘಟನೆಗಳಾಗಿದ್ದು, ರಾಜ್ಯದಲ್ಲಿ ಕೋಮು ಸಂಘರ್ಷ ಸೃಷ್ಟಿಸಲು ಪ್ರಯತ್ನಿಸುತ್ತಿವೆ.

ಆದ್ದರಿಂದ ಈ ಸಂಘಟನೆಗಳನ್ನು ತಕ್ಷಣವೇ ನಿಷೇಧಿಸಬೇಕು. ಅವುಗಳ ಬ್ಯಾಂಕ್‌ ಖಾತೆ, ಸ್ಥಿರ ಮತ್ತು ಚರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್‌, ಮೂಡಬಿದರೆಯ ಪ್ರಶಾಂತ್‌ ಪೂಜಾರಿ ಹತ್ಯೆ ಪ್ರಕರಣಗಳಲ್ಲೂ ಪಿಎಫ್ಐ ಮತ್ತು ಕೆಎಫ್ಡಿ ಸಂಘಟನೆಗಳ ಸದಸ್ಯರು ಶಾಮೀಲಾಗಿದ್ದಾರೆ ಎಂದು ಗೊತ್ತಾಗಿದೆ ಎಂದು ಆರೋಪಿಸಿದರು.

ಕ್ರಮಕ್ಕೆ ಸರ್ಕಾರದ ಹಿಂದೇಟು: ಹಿಂದೂ ಕಾರ್ಯಕರ್ತರನ್ನು ಹತ್ಯೆಗೈದಿರುವ ಆರೋಪಿಗಳು ಸಮಾಜಘಾತುಕ ಸಂಘಟನೆಯ ಸದಸ್ಯರು ಎಂದು ಗೊತ್ತಾಗಿದ್ದರೂ ರಾಜ್ಯ ಸರ್ಕಾರ ಒಂದು ಕೋಮಿನ ಜನರನ್ನು ಸಮಾಧಾನಗೊಳಿಸುವ ಉದ್ದೇಶದಿಂದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ರಾಜ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

Advertisement

ಬಿಜೆಪಿ ಯುವ ಮೋರ್ಚಾ ಬೆಂಗಳೂರು ನಗರ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ, ನಗರ ಜಿಲ್ಲಾ ಘಟಕದ ಅಧ್ಯಕ್ಷ ನವೀನ್‌ ರೆಡ್ಡಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಸೇರಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next