ಬೆಂಗಳೂರು/ಹುಬ್ಬಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣದ ಬಗ್ಗೆ ಸಿಡಿದೆದ್ದಿರುವ ಬಿಜೆಪಿ, ಪ್ರಕರಣದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನೀಡಲಬೇಕೆಂದು ಆಗ್ರಹಿಸಿ ಶುಕ್ರವಾರ ರಾಜ್ಯಾ
ದ್ಯಂತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿತು.
ಈ ವೇಳೆ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಅನಂತರ ಬಿಡುಗಡೆಗೊಳಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿ ಹಲವು ಮುಖಂಡರು ಪಾಲ್ಗೊಂಡು, ಇದು ಅಂತಾರಾಜ್ಯ ಹಗರಣವಾಗಿರುವುದರಿಂದ ಸಿಬಿಐ ತನಿಖೆ ನಡೆಸಬೇಕು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಅಗ್ರಹಿಸಿದರು.
ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ಬಿಜಯೇಂದ್ರ ನೇತೃತ್ವದಲ್ಲಿ, ಕೋಲಾರದಲ್ಲಿ ಆರ್.ಅಶೋಕ್ ನೇತೃತ್ವದಲ್ಲಿ, ಬಳ್ಳಾರಿಯಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಬೃಹತ್ ಪ್ರತಿಭಟನೆ ನಡೆಯಿತು. ಕಾರವಾರದಲ್ಲಿ ಬಿಜೆಪಿ ಎಸ್ಸಿ ಎಸ್ಟಿ ಮೊರ್ಚಾದಿಂದ ಇನ್ನು, ಮಂಗಳೂರು, ಉಡುಪಿ, ವಿಜಯಪುರ, ಹುಬ್ಬಳ್ಳಿ, ಕೊಪ್ಪಳ, ಬೀದರ್, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಚಾಮರಾಜನಗರ ಸೇರಿ ಹಲವೆಡೆ ಪ್ರತಿಭಟನೆ ನಡೆಸಲಾಯಿತು.