Advertisement

ಬಿಜೆಪಿ ಪ್ರತಿಭಟನೆ, ಗದ್ದಲ: ಗೌರ್ನರ್‌ ಭಾಷಣ ಮೊಟಕು

09:00 AM Feb 07, 2019 | Team Udayavani |

ಬೆಂಗಳೂರು: ಪ್ರತಿಪಕ್ಷಗಳ ಪ್ರತಿಭಟನೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಹಿನ್ನೆಲೆಯಲ್ಲಿ ರಾಜ್ಯಪಾಲ ವಜೂಭಾಯ್‌ವಾಲಾ ಅವರು ವಿಧಾನಮಂಡಲದ ಜಂಟಿ ಅಧಿವೇಶನದ ಭಾಷಣ ಮೊಟಕುಗೊಳಿಸಿ ನಿರ್ಗಮಿಸಿದರು.

Advertisement

ಪ್ರತಿಪಕ್ಷ ಸದಸ್ಯರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಅಪರೂಪ. ಅದರಲ್ಲೂ ಕೇಂದ್ರದ ಬಿಜೆಪಿ ಸರ್ಕಾರವೇ ನೇಮಿಸಿದ ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಬಂದಾಗ ಇಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿ ಸದಸ್ಯರು ಭಾಷಣಕ್ಕೆ ಅಡ್ಡಿ ಪಡಿಸಿ, ನಿರ್ಗಮನ ವೇಳೆಯೂ ಕೆಲ ಸೆಕೆಂಡ್‌ ಅಡ್ಡಗಟ್ಟಿದ್ದರಿಂದ ಖುದ್ದು ರಾಜ್ಯಪಾಲರು ಗಲಿಬಿಲಿಗೊಳ್ಳುವಂತಾಯಿತು. 11.05 ನಿಮಿಷಕ್ಕೆ ಪ್ರಾರಂಭವಾದ ರಾಜ್ಯಪಾಲರ ಭಾಷಣ 11.10ಕ್ಕೆ ಮುಕ್ತಾಯಗೊಂಡಿತು. ಮೊದಲ ಪುಟದ ಕೆಲವು ಸಾಲು ಹಾಗೂ ಕೊನೆಯ ಪುಟದ ಕೊನೇ ಸಾಲು ಓದಿ ಅವರು ಭಾಷಣವನ್ನು ಮುಕ್ತಾಯಗೊಳಿಸಿದರು. ನಂತರ ಸದನದಲ್ಲಿ ರಾಜ್ಯಪಾಲರ ಭಾಷಣ ಮಂಡಿಸಲಾಯತು

ರಾಜ್ಯಪಾಲರು ಎಲ್ಲರನ್ನು ಸ್ವಾಗತಿಸಿ, ಈ ಅಧಿವೇಶನವು ರಾಜ್ಯವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಸವಾಲುಗಳ ಮೇಲಿನ ಅರ್ಥಪೂರ್ಣ ಚರ್ಚೆಗಳಿಗೆ ಸಾಕ್ಷಿಯಾಗುವುದೆಂದು ಮತ್ತು ಯೋಜನೆಗಳ ಅನುಷ್ಠಾನ ಮತ್ತು ಸೇವಾ ಪೂರೈಕೆಯನ್ನು ಸುಧಾರಿಸುವುದಕ್ಕಾಗಿ ಉತ್ತಮ ಚಿಂತನೆಯುಳ್ಳ ಸೃಜನಾತ್ಮಕ ಸಲಹೆಗಳು ಮೂಡಿಬರುವುದಕ್ಕೆ ಕಾರಣವಾಗುತ್ತದೆ ಎಂದು ಆಶಿಸುತ್ತೇನೆ ಎಂದು ಹೇಳುತ್ತಿದ್ದರೆ ಇತ್ತ ಬಿಜೆಪಿ ಸದಸ್ಯರು ಬೇಡವೇ ಬೇಡ ಸುಳ್ಳಿನ ಕಂತೆ ಎಂದು ಘೋಷಣೆ ಹಾಕಿ ಭಾಷಣಕ್ಕೆ ಅಡ್ಡಿಪಡಿಸಿದರು.

ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದನ್ನು ಸಮರ್ಥಿಸಿಕೊಂಡ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ನಾವು ರಾಜ್ಯಪಾಲರ ಭಾಷಣ ಬಹಿಷ್ಕರಿಸಿದ್ದೇವೆ. ಸರ್ಕಾರಕ್ಕೆ ಬಹುಮತ ಇಲ್ಲ. ಇವತ್ತು ಹತ್ತರಿಂದ ಹನ್ನೊಂದು ಶಾಸಕರು ಗೈರು ಹಾಜರಾಗಿದ್ದಾರೆ. ನಮ್ಮ ಮುಂದಿನ ಹೋರಾಟವನ್ನು ಗುರುವಾರ ಬೆಳಗ್ಗೆ ತೀರ್ಮಾನಿಸಲಿದ್ದೇವೆ ಎಂದು ಹೇಳಿದ್ದು, ಬಿಜೆಪಿ ನಡೆ ಕುತೂಹಲ ಮೂಡಿಸಿದೆ.

ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ

Advertisement

ಬೆಂಗಳೂರು: ಶತಮಾನದ ಶ್ರೇಷ್ಠ ಸಂತ ಡಾ.ಶಿವಕುಮಾರ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಸೇರಿದಂತೆ ಅಗಲಿದ ಗಣ್ಯರಿಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾ ಯಿತು. ವಿಧಾನಸಭೆಯಲ್ಲಿ ಸ್ಪೀಕರ್‌ ರಮೇಶ್‌ಕುಮಾರ್‌, ಸಂತಾಪ ನಿರ್ಣಯ ಮಂಡಿಸಿ ಡಾ.ಶಿವಕುಮಾರಸ್ವಾಮೀಜಿ, ಜಾರ್ಜ್‌ ಫ‌ನಾಂಡಿಸ್‌, ಮಾಜಿ ಶಾಸಕರಾದ ದತ್ತು ಯಲ್ಲಪ್ಪ ಹಕ್ಯಾಗೋಳ, ಸಾಲೇರ ಎಸ್‌.ಸಿದ್ದಪ್ಪ ಅವರ ಸೇವೆ ಸ್ಮರಿಸಿ ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯ ಗೋವಿಂದ ಕಾರಜೋಳ, ವಿ.ಸೋಮಣ್ಣ, ಎ.ಎಸ್‌.ನಡಹಳ್ಳಿ ಸೇರಿದಂತೆ ಹಲವು ಸದಸ್ಯರು ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿದರು.

ಹಿಂದೆಯೂ ಆಗಿತ್ತು
ರಾಜ್ಯಪಾಲರ ಜಂಟಿ ಅಧಿವೇಶನ ಸಂದರ್ಭದಲ್ಲಿ ಭಾಷಣ ಮೊಟಕುಗೊಳಿಸಿದ್ದು ಇದೇ ಮೊದಲಲ್ಲ. ಕನ್ನಡದಲ್ಲೇ ಭಾಷಣಕ್ಕಾಗಿ ಒತ್ತಾಯಿಸಿ ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌ ಪ್ರತಿಭಟನೆ ತೋರಿದ ಸಂದರ್ಭದಲ್ಲೂ ಈ ರೀತಿ ಆಗಿದೆ. ಆ ನಂತರವೂ ಕೆಲವೊಮ್ಮೆ ಪ್ರತಿಭಟನೆ ವ್ಯಕ್ತವಾದಾಗ ರಾಜ್ಯಪಾಲರು ಭಾಷಣ ನಿಲ್ಲಿಸಿ ನಿರ್ಗಮಿಸಿದ್ದು ಇದೆ. ಖುರ್ಷಿದ್‌ ಆಲಂಖಾನ್‌, ಟಿ.ಎನ್‌.ಚತುರ್ವೇದಿ, ಹಂಸರಾಜ್‌ ಭಾರದ್ವಾಜ್‌ ಅವರು ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ, ಅಂದರೆ ಎಸ್‌.ಬಂಗಾರಪ್ಪ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿದ ಘಟನೆಗಳು ಮರುಕಳಿಸಿದ್ದವು. ವಿಶೇಷವೆಂದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next