ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ಬಳಿಕ ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ ಸದಸ್ಯರು ನಡೆಸಿದ ದಾಂಧಲೆ, ಹಿಂಸಾಚಾರ ಖಂಡಿಸಿ ನಗರ ಬಿಜೆಪಿ ಘಟಕ ಬುಧವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿಯು 23 ಸ್ಥಾನ ಗೆಲ್ಲುವ ವಿಶ್ವಾಸವಿದ್ದು, ಇದರಿಂದ ಹತಾಶೆಗೋಂಡಿರುವ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕರ ರ್ಯಾಲಿ,
ಸಮಾವೇಶಗಳಿಗೆ ಅವಕಾಶ ನಿರಾಕರಿಸುವುದು ಸೇರಿದಂತೆ ಸರ್ವಾಧಿಕಾರಿ ಮನೋಭಾವ ತೋರುತ್ತಿದ್ದಾರೆ. ಕಮ್ಯುನಿಸ್ಟ್ ಆಡಳಿತದಿಂದ ಬೇಸತ್ತ ಜನ ಟಿಎಂಸಿ ಆಯ್ಕೆ ಮಾಡಿದರೆ ಮಮತಾ ಬ್ಯಾನರ್ಜಿ ಕಮ್ಯೂನಿಸ್ಟರಿಗಿಂತಲೂ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ. ಇದಕ್ಕೆ ಜನ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ಅಲ್ಪಸಂಖ್ಯಾತರು, ಬಾಂಗ್ಲಾ ಅಕ್ರಮ ನುಸುಳುಕೋರರನ್ನು ಓಲೈಸುತ್ತಿರುವ ಮಮತಾ ಬ್ಯಾನರ್ಜಿಯವರು ರಾಷ್ಟ್ರೀಯವಾದ ಪ್ರತಿಪಾದಿಸುವ ಬಿಜೆಪಿ ಮೇಲೆ ದೌರ್ಜನ್ಯ ನಡೆಯುತ್ತಿದ್ದಾರೆ. ರೋಹಿಂಗ್ಯಾ ಮುಸ್ಲಿಮರು, ಬಾಂಗ್ಲಾ ಅಕ್ರಮ ನುಸುಳುಕೋರರ ಪರವಾಗಿ ನಿಲ್ಲುವ ಮೂಲಕ ರಾಷ್ಟ್ರೀಯ ವಾದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶೇ.17ರಷ್ಟು ಮತ ಗಳಿಸಿತ್ತು. ಈ ಬಾರಿ ಶೇ.35ರಿಂದ ಶೇ. 40ರಷ್ಟು ಮತ ಪಡೆಯುವ ನಿರೀಕ್ಷೆ ಇದೆ. ಇದರಿಂದಾಗಿ ಹತಾಶೆಗೆ ಒಳಗಾಗಿರುವ ಮಮತಾ ಬ್ಯಾನರ್ಜಿಯವರು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.
ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮಾಜಿ ಉಪಮೇಯರ್‌ಗಳಾದ ಎಸ್. ಹರೀಶ್, ವಾಸುದೇವ ಮೂರ್ತಿ, ರಾಜ್ಯ ಬಿಜೆಪಿ ಸಹ ವಕ್ತಾರ ಎಸ್.ಪ್ರಕಾಶ್, ಪಾಲಿಕೆ ಬಿಜೆಪಿ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.