Advertisement

ಕೈಕಂಬ: ಹಕ್ಕುಪತ್ರ ವಿತರಣೆ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

02:43 PM Feb 18, 2018 | |

ಕೈಕಂಬ : ಸ್ಥಳೀಯ ಫಲಾನುಭವಿಗಳಿಗೆ 94ಸಿ ಹಾಗೂ 94ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡುವುದಾಗಿ ಕ್ಷೇತ್ರದ ಶಾಸಕರು ಭರವಸೆ ಕೊಟ್ಟು, ಈಗ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶುಕ್ರವಾರ ಕೈಕಂಬ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿಯ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಹಕ್ಕುಪತ್ರ ಪಡೆಯುವುದಕ್ಕೆ ಅರ್ಹರಾಗಿರುವ ಸ್ಥಳೀಯ ಅನೇಕ ಫಲಾನುಭವಿಗಳು ಪಾಲ್ಗೊಂಡಿದ್ದರು.

ನಾಟಕವಾಡುವ ಅಗತ್ಯವಿಲ್ಲ
ಪ್ರತಿಭಟನ ಸಭೆಯಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ ನವರು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಇಷ್ಟೊಂದು ನಾಟಕವಾಡುವ ಅಗತ್ಯವಿರಲಿಲ್ಲ. ಏಕೆಂದರೆ, ರಾಜ್ಯದಲ್ಲಿ ಸರಕಾರಿ ಜಾಗದಲ್ಲಿ ನೆಲೆನಿಂತು ಹಕ್ಕುಪತ್ರಕ್ಕಾಗಿ ಅರ್ಜಿ ಕೊಟ್ಟವರ ಸಂಖ್ಯೆ 9.5 ಲಕ್ಷ. ದ.ಕ. ಜಿಲ್ಲೆಯಲ್ಲಿ 35 ಸಾವಿರ ಮತ್ತು ಉಡುಪಿ ಜಿಲ್ಲೆಯಲ್ಲಿ 27 ಸಾವಿರ ಜನರಿಗೆ ಹಕ್ಕುಪತ್ರ ಕೊಡಬೇಕಿದೆ.

 15 ಸಾವಿರ ಜನರನ್ನು ಸೇರಿಸಿ ಕೇವಲ 15 ಮಂದಿಗೆ ಹಕ್ಕುಪತ್ರ ನೀಡುವುದಾದರೆ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬರಬೇಕಾ? ಸಚಿವ ಕಾಗೋಡು ತಿಮ್ಮಪ್ಪ ಅವರು ಸ್ಥಳೀಯ ಶಾಸಕರ ನೇತೃತ್ವದಲ್ಲಿ ದೊಡ್ಡ ಸಮಾರಂಭ ಮಾಡಿಸಿ ಐದು ಮಂದಿಗೆ ಹಕ್ಕುಪತ್ರ ನೀಡುವುದಕ್ಕೆ ಸರಕಾರದ ದುಡ್ಡು ಖರ್ಚು ಮಾಡಿ ಇಲ್ಲಿಗೆ ಬರುವ ಅಗತ್ಯವಿರಲಿಲ್ಲ ಎಂದು ಆರೋಪಿಸಿದರು.

ಸ್ಥಳೀಯ ಶಾಸಕರ ಜವಾಬ್ದಾರಿ
ಬಡವರಿಗೆ ಹಕ್ಕುಪತ್ರವನ್ನು ಕೊಡಿಸುವುದು ಸ್ಥಳೀಯ ಶಾಸಕರ ಸಂವಿಧಾನಬದ್ಧ ಜವಾಬ್ದಾರಿ. ಅದು ಬಿಟ್ಟು ಅದ್ದೂರಿ ಸಮಾರಂಭವನ್ನು ಆಯೋಜಿಸಿ ಸಾವಿರಕ್ಕೂ ಅಧಿಕ ಮಂದಿಯನ್ನು ಕರೆಸಿಕೊಂಡು ಅವರನ್ನೆಲ್ಲ ಗಂಟೆಗಟ್ಟಲೆ ಕಾಯಿಸಿ ಅನಂತರ ಬರಿಗೈಯಲ್ಲಿ ವಾಪಸ್‌ ಕಳುಹಿಸಿರುವುದು ಎಷ್ಟು ಸರಿ? ಬಿಜೆಪಿ ಸರಕಾರವಿದ್ದಾಗ ನಾನೇ ಮಂತ್ರಿಯಾಗಿ 94ಸಿ ಮತ್ತು 94 ಸಿಸಿ ಯೋಜನೆಯನ್ನು ಜಾರಿಗೊಳಿಸಿದ್ದೆ, 2012ರ ಡಿ. 31ರೊಳಗೆ ಯಾರೆಲ್ಲ ಮನೆ ಕಟ್ಟಿ ವಾಸ್ತವ್ಯ ಹೂಡಿದ್ದರೋ ಅಂಥವರಿಗೆಲ್ಲ ಉಚಿತವಾಗಿ ಹಕ್ಕುಪತ್ರ ಕೊಡುವುದೇ 94ಸಿಮತ್ತು 94ಸಿಸಿ. ಇದಕ್ಕೆ ಕಾಂಗ್ರೆಸ್‌ನವರು ಬಡವರಿಂದ ಇದಕ್ಕೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು
ಕೋಟ ದೂರಿದರು.

Advertisement

ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ಡಾ| ಭರತ್‌ ಶೆಟ್ಟಿ ಮಾತನಾಡಿ, ಶಾಸಕ ಮೊಯಿದಿನ್‌ ಬಾವಾ ಅಧಿಕಾರವನ್ನು ದುರುಪಯೋಗ ಮಾಡಿ, ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಇದರ ವಿರುದ್ಧ ಪ್ರತಿಭಟನೆ ಮಾಡುವುದು ಜನರ ಹಕ್ಕು. ಇದು ಸರಕಾರದ ಭಿಕ್ಷೆ ಅಲ್ಲ. ಹಿಂದೆ ಬಿಜೆಪಿ ಸರಕಾರವಿದ್ದಾಗ ಕೇವಲ 350 ರೂ. ಪಡೆದು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ.

ಅದೇ ಈಗ ಬಡವರಿಂದ 10 ಸಾವಿರ ರೂ.ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಸಾಂಕೇತಿಕವಾಗಿ ಹಕ್ಕುಪತ್ರ ನೀಡುವುದಾದರೆ, 1,500 ಜನರನ್ನು ಕಾಯಿಸಿದ್ದು ಏಕೆ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಕೃಷ್ಣ ಜೆ. ಪಾಲೆಮಾರ್‌, ಜಿ.ಪಂ. ಸದಸ್ಯ ಜನಾರ್ದನ ಗೌಡ, ರಾಜ್ಯ ಹಿಂದುಳಿದ ವರ್ಗಗಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌, ಶಶಿಕಲಾ ಬೊಂಡಂತಿಲ, ರುಕ್ಮಯ ನಾಯ್ಕ, ಗುರುಪುರ ಶಕ್ತಿ ಕೇಂದ್ರದ ಅಧ್ಯಕ್ಷ ದೋಗು ಪೂಜಾರಿ, ಆನಂದ ದೇವಾಡಿಗ, ಗುರುಚಂದ್ರ, ತಾ.ಪಂ. ಸದಸ್ಯ ನಾಗೇಶ್‌ ಶೆಟ್ಟಿ, ರಣದೀಪ್‌ ಕಾಂಚನ್‌, ಶಿವಪ್ಪ ಬಂಗೇರ, ರೂಪೇಶ್‌ ಕುಮಾರ್‌ ಅದ್ಯಪಾಡಿ, ಮಾಲತಿ ಪಾಲ್ಗೊಂಡಿದ್ದರು. ಬಳಿಕ ಮುಖಂಡರು ಗುರುಪುರ ನಾಡ ಕಚೇರಿಗೆ ತೆರಳಿ ಉಪತಹಶೀಲ್ದಾರ್‌ ಶಿವಪ್ರಸಾದ್‌ಗೆ ಮನವಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next